ಮೈಸೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆ.21 ರಂದು ಬೆಂಗಳೂರಿನ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾ ಲಯದ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೇಳಿದರು.
ಕಬ್ಬು ಇಳುವರಿ ಪ್ರಮಾಣವನ್ನು ಶೇ.8.5ಕ್ಕೆ ಇಳಿಕೆ ಮಾಡಬೇಕು, ಕಾರ್ಖಾನೆಯೇ ಕಬ್ಬು ಕಟಾವು ಮಾಡಿ ತೆಗೆದುಕೊಂಡು ಹೋಗಬೇಕು, ಬಾಕಿ ಹಣ ವಾಪಸು ನೀಡಬೇಕೆಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಬ್ಬು ಬೆಳೆಗಾರರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾರತಮ್ಯದ ನೀತಿ ಅನುಸರಿಸುತ್ತಿವೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ದರದಲ್ಲಿ ರೈತರನ್ನು ವಂಚಿಸುತ್ತಿದ್ದಾರೆ. ರಂಗರಾಜನ್ ವರದಿ ಆಧರಿಸಿ ಉಪ ಉತ್ಪನ್ನ ಲಾಭ ನೀಡುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ರೈತರ ಅಸಹಾಯಕತೆ ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಪ್ರಸನ್ನ ಗೌಡ, ಹೊಸೂರು ಕುಮಾರ್, ಬೊಕ್ಕಳ್ಳಿ ನಂಜುಂಡಸ್ವಾಮಿ, ಗುರುಲಿಂಗಯ್ಯ, ಕೆಂಪುಗೌಡ, ಆನಂದೂರು ಪ್ರಭಾಕರ್ ಇದ್ದರು.