ಜಿಲ್ಲೆ

ಅಡಕೆ ಕೃಷಿಕರಿಗೆ ವಿಶೇಷ ಪ್ಯಾಕೇಜ್‌ಗೆ ಒತ್ತಾಯ

Mangaluru - Nishantha Narayana


ಪುತ್ತೂರು: ದಕ್ಷಿಣ ಕನ್ನಡದಲ್ಲಿ ಈ ಬಾರಿ ಶೇ.೭೦ರಷ್ಟು ಮಳೆ ಹೆಚ್ಚು ಸುರಿದಿರುವುದ ಮಾತ್ರವಲ್ಲದೆ ಎಡೆಬಿಡದೆ ಸುರಿದಿರುವುದರಿಂದ ಅಡಕೆ ಕೃಷಿಕರಿಗೆ ಔಷಧ ಸಿಂಪಡಣೆಗೆ ಅವಕಾಶವಾಗದೆ ಕೊಳೆರೋಗಕ್ಕೆ ತುತ್ತಾಗಿದೆ. ಕೃಷಿಕರಿಗೆ ಪ್ರಕೃತಿ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹಿಸಿದರು.


ಎಪ್ರಿಲ್, ಮೇ ತಿಂಗಳಲ್ಲಿ ವಿಪರೀತ ಬಿಸಿಲಿದ್ದು, ಸಿಂಗಾರ ಒಣಗಿ ಎಳೆ ಅಡಕೆ ಬಿದ್ದು ಹೋಗಿದೆ. ಆ ಬಳಿಕ ಸುರಿದ ಮಳೆ ವಿರಾಮ ನೀಡದ ಕಾರಣ ಉಳಿದ ಅಡಕೆ ಕೊಳೆರೋಗಕ್ಕೆ ತುತ್ತಾಗಿದೆ. ಅಡಕೆಯ ಜತೆಗೆ ಕಾಳುಮೆಣಸು ಬಳ್ಳಿಗಳೂ ರೋಗಕ್ಕೆ ತುತ್ತಾಗಿ ಕರಗಿ ಹೋಗುತ್ತಿವೆ. ಇದರಿಂದ ರೈತರು ಆದಾಯದ ಮೂಲವನ್ನು ಕಳೆದುಕೊಳ್ಳುವ ಜತೆಗೆ ಬೆಳೆ ಸಾಲಗಳನ್ನು ಮುಂದಿನ ಸಾಲಿನಲ್ಲಿ ಪಾವತಿಸಲಾಗದ ಪರಿಸ್ಥಿತಿಯಿದೆ. ಸರ್ಕಾರ ತಕ್ಷಣ ಇದಕ್ಕೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.


ಕೆಲವು ರೈತರಿಗೆ ಬೆಳೆ ಸಮೀಕ್ಷೆಯನ್ನು ಸರಿಯಾಗಿ ಮಾಡಲಾಗದ ಕಾರಣದಿಂದ ವಿಮೆಯನ್ನು ಪಾವತಿಸಲು ಸಾಧ್ಯವಾಗಿಲ್ಲ. ಬೆಳೆ ವಿಮೆಯಿಂದ ಕೃಷಿಕನಿಗೆ ಆಗಿರುವ ನಷ್ಟದ ಮೊತ್ತ ಭರ್ತಿಯಾಗದ ಕಾರಣ ದಕ್ಷಿಣ ಕನ್ನಡದ ಕೃಷಿಕರಿಗೆ ಸರ್ಕಾರ ವಿಶೇಷ ವ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.