| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕರೊನಾ ಕಾಲಘಟ್ಟದಲ್ಲಿ ಆಕ್ಸಿಜನ್ ಲೆವೆಲ್ನದ್ದೇ ಎಲ್ಲಡೆ ಚರ್ಚೆ ನಡೆದಿದೆ. ಹಾಗೇ, ರಾಜಕೀಯ ವಲಯದಲ್ಲಿ ಕಾಂಗ್ರೆಸ್ನ ಉತ್ಸಾಹದ ಪ್ರಮಾಣ ಹೆಚ್ಚಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ವಾರ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಬಂದಿದ್ದರಿಂದ ಖುಷಿಯಲ್ಲಿ ತೇಲುತ್ತಿದ್ದವರಿಗೆ ಮಸ್ಕಿ ಉಪ ಚುನಾವಣೆ ಫಲಿತಾಂಶ ಮತ್ತಷ್ಟು ಸಂಭ್ರಮಿಸುವಂತೆ ಮಾಡಿದೆ. ಬಿಜೆಪಿ ಪ್ರಬಲವಾಗಿದ್ದ ಬೆಳಗಾವಿಯಲ್ಲೂ ಚಾಕಚಕ್ಯತೆ ಮೆರೆದಿದ್ದು ಪಕ್ಷದ ನಾಯಕರ ಸಾಹಸವನ್ನು ಪರಿಚಯಿಸಿದೆ.
ರಾಜಕೀಯ ಪಕ್ಷಗಳಿಗೆ ಉತ್ಸಾಹ ಕಾಣಿಸುವುದು, ಪುಟಿದೇಳುವಂತೆ ಮಾಡುವುದು ಚುನಾವಣೆ ಗೆಲುವುಗಳು. 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಪಕ್ಷದಲ್ಲಿ ಒಂದಷ್ಟು ಉತ್ಸಾಹ ಕಾಣಿಸಿದೆ. 2018ರಲ್ಲಿ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇದೀಗ ಬಸವಕಲ್ಯಾಣವನ್ನು ಪಕ್ಷ ಕಳೆದುಕೊಂಡಿದೆ. ಮಸ್ಕಿ ಗೆಲುವು ಪಕ್ಷದ ನಾಯಕರಿಗೆ ಸಂಭ್ರಮ ತಂದಿದೆ. ಉಪಚುನಾವಣೆಗೆ ಮುನ್ನ ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಷಯದಲ್ಲಿ ಪಕ್ಷದ ಪ್ರಮುಖ ನಾಯಕರ ನಡುವೆ ಕಿತ್ತಾಟ ನಡೆದಿತ್ತು. ಅದಕ್ಕೂ ಮುನ್ನ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಹೇಳಿಕೆಗಳು ಬಂದು ವೈಮನಸ್ಯ ಉಂಟಾಗಿತ್ತು. ಇದೆಲ್ಲವನ್ನೂ ಗಮನಿಸಿದ್ದ ಪಕ್ಷದ ರಾಜ್ಯದ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಬುದ್ಧಿವಾದ ಹೇಳಿ ಎಲ್ಲರೂ ಒಟ್ಟಿಗೆ ಹೋಗಲೇಬೇಕೆಂದು ತಾಕೀತು ಮಾಡಿದ್ದರು. ಪ್ರಚಾರಕ್ಕೆ ಬಂದ ಸಂದರ್ಭದಲ್ಲೂ ಒಂದಷ್ಟು ತಂತ್ರಗಾರಿಕೆ ರೂಪಿಸಿದ್ದರು. ಮುಖಂಡರೆಲ್ಲ ಒಗ್ಗಟ್ಟಿ ನಿಂದಲೇ ಪ್ರಚಾರದಲ್ಲಿ ತೊಡಗಿದ್ದರು. ಹಿಂದಿನ ಉಪಚುನಾವಣೆ ಗಳಂತೆ ನಡೆಸದೆ ವ್ಯವಸ್ಥಿತವಾಗಿ ನಡೆಸಲಾಗಿತ್ತು. ಆ ಪ್ರಯತ್ನದ ಪ್ರತಿಫಲನ ಫಲಿತಾಂಶದಲ್ಲಿ ಕಾಣಿಸಿದೆ.
ಯುವ ಸಮುದಾಯವನ್ನು ಪಕ್ಷ ಪ್ರಚಾರದಲ್ಲಿ ಬಳಸಿಕೊಂಡಿದೆ. ಮಸ್ಕಿಯಲ್ಲಿ ಯುವ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ತಂಗಡಗಿ ಇತರರು ಸಾಕಷ್ಟು ಶ್ರಮ ಹಾಕಿದ್ದರು. ಸಿದ್ದರಾಮಯ್ಯ ಮಾರ್ಗದರ್ಶನವಿತ್ತು. ಬಸವಕಲ್ಯಾಣದಲ್ಲಿ ಟಿಕೆಟ್ ಹಂಚಿಕೆ ಅಸಮಾಧಾನವನ್ನು ಕೊನೆಗಾಣಿಸಲು ಸಾಧ್ಯವಾಗಲಿಲ್ಲ. ಅಲ್ಲಿಯೂ ಒಗ್ಗಟ್ಟು ರೂಪಿಸುವ ಅಗತ್ಯವಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಬರುವುದಾದರೆ, ಪಕ್ಷ ಸೋತರೂ ಸಹ ಮುಂದಿನ ದಿನಗಳಲ್ಲಿ ಕಾಯರ್ಕರ್ತರು, ಮುಖಂಡರು ಎದೆಯುಬ್ಬಿಸಿ ನಡೆಯುವಷ್ಟು ಉತ್ಸಾಹ ತಂದುಕೊಟ್ಟಿದೆ. ಕೈಬಿಟ್ಟು ಹೋಗಿದ್ದ ಅಹಿಂದ ಮತಗಳು ಮತ್ತೆ ಕಾಂಗ್ರೆಸ್ ಕಡೆ ಬರಬೇಕೆಂಬ ನಿಟ್ಟಿನಲ್ಲಿಯೇ ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲಾಗಿತ್ತು. ಆ ತಂತ್ರ ಕೆಲಸ ಮಾಡಿದ್ದು, ಮತ ಒಟ್ಟುಗೂಡಿಸುವಲ್ಲಿ ಅವರು ಸಫಲರಾಗಿದ್ದಾರೆ.
| ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ
| ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷ