ಬ್ಯಾಡಗಿ: ಯುವಕರು ದುಶ್ಚಟಗಳಿಗೆ ದಾಸರಾಗಿ ಆರೋಗ್ಯದ ಜೊತೆ ಸಂಪೂರ್ಣ ಜೀವನ ಹಾಳುಮಾಡಿಕೊಳ್ಳುವ ಮೂಲಕ ಸಮಾಜ ಹಾಗೂ ತಮ್ಮ ಕುಟುಂಬಗಳ ನೆಮ್ಮದಿ ಕೆಡಿಸಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಜಾಗೃತಿ ಮೂಡಿಸುವ ಮೂಲಕ ಅವರ ಮನ ಪರಿವರ್ತನೆ ಹಾಗೂ ತಿಳಿವಳಿಕೆ ಕಾರ್ಯಕ್ರಮ ಅಗತ್ಯವಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಸುರೇಶ ವಗ್ಗನವರ ತಿಳಿಸಿದರು.
ಪಟ್ಟಣದ ಶ್ರೀ ಮಹಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
15 ವರ್ಷದ ದಾಟಿದ ಬಹುತೇಕ ಯುವಕರು ಗುಟ್ಖಾ ಸೇವಿಸುತ್ತಿರುವುದು ಖೇದವೆನಿಸುತ್ತಿದೆ. ಇದರಿಂದ ಭವಿಷ್ಯದ ಅವರ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗದೆ, ದೈಹಿಕ ಚಟುವಟಿಕೆ ಕುಂಠಿತವಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ರೈತರು, ಯುವಕರು ಹಾಗೂ ವಿದ್ಯಾರ್ಥಿಗಳು ತಂಬಾಕು ಮತ್ತು ಅದರಿಂದ ಸಿದ್ಧವಾಗುವ ಸಿಗರೇಟ್, ಗುಟ್ಖಾ ಇನ್ನಿತರ ವಸ್ತುಗಳಿಂದ ದೂರವಿರುವುದು ಒಳ್ಳೆಯದು. ಆರಂಭದಿಂದಲೇ ಇಂತಹ ಹವ್ಯಾಸಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಮಹಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಯದರ್ಶಿ ಸಂಜೀವ ಅಂಗಡಿ, ಪ್ರಾಚಾರ್ಯ ಮಾರುತಿ ಗಣಜೂರು, ಸಾಂಕ್ರಾಮಿಕ ರೋಗಶಾಸ್ತ್ರ ಡಾ.ಸಂತೋಷ ಹಾಲುಂಡಿ, ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಪ್ರಶಾಂತ ನವಲೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿ. ಮಮತಾ, ನ್ಯಾಯವಾದಿಗಳ ಸಂಘದ ಸಹಕಾರ್ಯದರ್ಶಿ ಮಂಜುನಾಥ ಕುಮ್ಮೂರ, ನ್ಯಾಯವಾದಿಗಳಾದ ಶಂಕರ ರ್ಬಾ, ಎಂ. ಜೆ. ಮುಲ್ಲಾ, ಭಾರತಿ ಕುಲ್ಕರ್ಣಿ, ಎನ್.ಎಸ್. ಬಟ್ಟಲಕಟ್ಟಿ, ಎಸ್.ಎಸ್. ಕೊಣ್ಣೂರ ಇತರರಿದ್ದರು.