ಮಡಿಕೇರಿ: ಪೋಷಕರು ದೇಶಭಕ್ತಿ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ಬಾಲ್ಯದಿಂದಲೇ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು ಹಾಗೂ ದೇಶದ ಪರಂಪರೆಯನ್ನು ಉಳಿಸಬಹುದು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊಟೇಲ್ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾದ ಕೊಡಗು ಜಿಲ್ಲಾ ಘಟಕವನ್ನು ಮತ್ತು ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಯುವಕರ ಸಂಖ್ಯೆ ಅತ್ಯಂತ ಪ್ರಭಾವಶಾಲಿಯಾಗಿದ್ದು, ಪ್ರತಿಯೊಬ್ಬರು ಭ್ರಷ್ಟಾಚಾರದ ನಿರ್ಮೂಲನೆಗೆ ಮುಂದಾದರೆ ಮಾತ್ರ ೨೦೪೭ಕ್ಕೆ ಭಾರತ ಸರ್ವಾಂಗೀಣ ಅಭಿವೃದ್ಧಿ ಹೊಂದಿದ ದೇಶವಾಗಿ ಕಾಣಲು ಸಾಧ್ಯವಾಗುತ್ತದೆ ಮತ್ತು ಆರ್ಥಿಕವಾಗಿ ಸದೃಢವಾಗುತ್ತದೆ ಎಂದರು.
ಹುಟ್ಟಿದ ಮಕ್ಕಳಲ್ಲಿ ಡಾಕ್ಟರ್, ಇಂಜಿನಿಯರ್ ಗಳಾಗುವಂತೆ ಸ್ಫೂರ್ತಿ ತುಂಬುವ ಬದಲು ಜೀವನದ ಮೌಲ್ಯಗಳನ್ನು ನೀಡುವ ಕೆಲಸವನ್ನು ಮಾಡಬೇಕು. ಇಡೀ ಜಗತ್ತಿಗೆ ಮೌಲ್ಯಗಳನ್ನು ನೀಡುವ ನಾವು ನಮ್ಮೊಳಗಿನ ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು, ನಮ್ಮೊಳಗೆ ನಾವು ಬದಲಾಗಬೇಕು. ಆಗ ಮಾತ್ರ ಅತ್ಯದ್ಭುತ ಜಗತ್ತನ್ನು ಕಾಣಲು ಸಾಧ್ಯ. ಆದರ್ಶ, ಮೌಲ್ಯಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಅನಿವಾರ್ಯವಾಗಿ ಸಾಮಾಜಿಕ ಬದಲಾವಣೆ, ಜನಸಂಖ್ಯೆ ಸ್ಫೋಟದಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ದೇಶ ಎಂದರೆ ಬಾಹ್ಯ ಸೌಂದರ್ಯ, ಬಾಹ್ಯ ಕಟ್ಟಡಗಳಲ್ಲ. ದೇಶವನ್ನು ಪ್ರತಿನಿಧಿಸುವುದು, ಸದೃಢವಾದ ಮನಸ್ಥಿತಿ ಹೊಂದಿದ ಬಾಹ್ಯ ಸಂಪನ್ಮೂಲ. ಆ ನಿಟ್ಟಿನಲ್ಲಿ ಸದೃಢವಾದ ಮನಸ್ಥಿತಿಯನ್ನು ಹೊಂದಬೇಕು ಎಂದರು.
ಮಡಿಕೇರಿ ಲೋಕಾಯುಕ್ತ ಕಚೇರಿಯ ಡಿವೈಎಸ್‌ಪಿ ಲೋಕೇಶ್ ಕುಮಾರ್ ಮಾತನಾಡಿ, ಭ್ರಷ್ಟಾಚಾರ ಎಂಬುವುದು ಕ್ಯಾನ್ಸರ್ ಇದ್ದಂತೆ, ಇದರಿಂದ ದೇಶದ ಪ್ರಗತಿಗೆ ಕುಂಟಿತವಾಗುತ್ತದೆ. ಬೇರೆ ಜಿಲ್ಲೆಗೆ ಹೊಲಿಸಿದರೆ ಕೊಡಗಿನಲ್ಲಿ ಭ್ರಷ್ಟಾಚಾರ ಕಡಿಮೆ ಇದ್ದು, ಜನ ಮತ್ತಷ್ಟು ಜಾಗೃತರಾಗಬೇಕು. ಭಾರತ ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ಎಂಬ ಪಟ್ಟಿಗೆ ಸೇರಬೇಕೆಂಬ ಹಂಬಲ ಹೊಂದಿದೆ. ಆದರೆ, ಭ್ರಷ್ಟಾಚಾರ ದೇಶದ ದೊಡ್ಡ ಸಮಸ್ಯೆಯಾಗಿದ್ದು, ಇದು ನಿರ್ಮೂಲನೆಯಾಗದಿದ್ದರೆ ಅಭಿವೃದ್ಧಿ ಅಸಾಧ್ಯ. ಮನುಷ್ಯನ ಯೋಗ್ಯತೆಯನ್ನು ಹಣದಿಂದ ಅಳೆಯುವುದರಿಂದ ಇಂದು ಹಣ ಸಂಪಾದನೆ ಒಂದೇ ಗುರಿಯಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವವರೇ ಭ್ರಷ್ಟಾಚಾರದಲ್ಲಿ ಮುಳುಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಹಣ ಗಳಿಕೆಯೊಂದೇ ಗುರಿಯಾಗಬಾರದು, ಇದಕ್ಕೆ ಅಂತ್ಯವಿಲ್ಲ. ಇದರಿಂದ ಸಂತೋಷ ಸಿಗಲು ಸಾಧ್ಯವಿಲ್ಲ. ತಮ್ಮ ನಿಶ್ವಾರ್ಥ ಸೇವೆಯ ಮೂಲಕ ಜನರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಭ್ರಷ್ಟಚಾರಕ್ಕೆ ಹಲವು ಮುಖಗಳಿವೆ, ಇದರ ನಿರ್ಮೂಲನೆ ಕಷ್ಟ ಸಾಧ್ಯ. ಎಲ್ಲರಲ್ಲೂ ಸಮಾನ ಮನಸ್ಸಿದ್ದರೆ ಮಾತ್ರ ಇದನ್ನು ತಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ಅಗತ್ಯವಿದೆ ಎಂದರು.
ಎಲ್ಲಾ ಜಿಲ್ಲೆಗಳಲ್ಲೂ ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರದ ವಿರುದ್ಧ ಎರಡು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸರ್ಕಾರದ ನಿಯಂತ್ರಣವಿಲ್ಲ. ಆದ್ದರಿಂದ ಸಾರ್ವಜನಿಕರು ಇಲಾಖೆಗಳಲ್ಲಾಗುವ ಭ್ರಷ್ಟಾಚಾರದ ವಿರುದ್ಧ ಯಾವುದೇ ಭಯ ಆತಂಕವಿಲ್ಲದೆ ಲೋಕಯುಕ್ತಕ್ಕೆ ದೂರು ನೀಡುವ ಮೂಲಕ ಭ್ರಷ್ಟಾಚಾರದ ನಿರ್ಮೂಲನೆಗೆ ಪಣ ತೊಡಬೇಕು ಎಂದು ಲೋಕೇಶ್ ಕುಮಾರ್ ತಿಳಿಸಿದರು.
ದೆಹಲಿ ದಕ್ಷಿಣ ಭಾರತ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್.ಭದ್ರಶೆಟ್ಟಿ ಕೊಡಗು ಘಟಕದ ನೂತನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಕೊಡಗು ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾದ ಜಿಲ್ಲೆ, ಇಲ್ಲಿನ ಜನ ಜಾಗೃತರಾಗಿದ್ದು, ಭ್ರಷ್ಟಾಚಾರ ಸೇರಿದಂತೆ ಯಾವುದೇ ತಪ್ಪುಗಳನ್ನು ಪ್ರಶ್ನಿಸುವ ಗುಣವನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು.
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಮಾತನಾಡಿ, ಮತದಾನದ ಸಂದರ್ಭ ಯಾರೂ ಭ್ರಷ್ಟಚಾರಕ್ಕೆ ಒಳಗಾಗಬಾರದು, ನಮ್ಮ ಮನಸನ್ನು ಶುದ್ಧವಾಗಿಟ್ಟುಕೊಂಡು ಭ್ರಷ್ಟ ವ್ಯವಸ್ಥೆಯಿಂದ ಮುಕ್ತರಾಗಬೇಕು. ಪ್ರತಿಯೊಬ್ಬರು ಭ್ರಷ್ಟಾಚಾರ ನಿರ್ಮೂಲನೆಯ ಉದ್ದೇಶವನ್ನು ತಿಳಿದುಕೊಳ್ಳಬೇಕು. ಕಾರ್ಯಾಚರಣೆ ಯಾವುದೇ ಇರಲಿ ನಾವು ಮೊದಲು ಸಂಘಟಿತರಾಗಬೇಕು. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎಸ್.ಮಹೇಶ್, ರಾಷ್ಟ್ರದ ಅಭ್ಯುದಯಕ್ಕಾಗಿ ಭ್ರಷ್ಟಾಚಾರವನ್ನು ನಿಮೂರ್ಲನೆ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಮತ್ತು ನ್ಯಾಯಕ್ಕಾಗಿ ಹೋರಾಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧೀಕ್ಷಕ ಚೊಕ್ಕಾಡಿ ಅಪ್ಪಯ್ಯ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ವಿ.ಕುಂಬಾರ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಮೈಸೂರು ವಿಭಾಗದ ಅಧ್ಯಕ್ಷ ಎಸ್.ಗುರುಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯದ ನಾಯಕರು, ವಿವಿಧ ಜಿಲ್ಲೆಯ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಗಣೇಶ್ ಪ್ರಾರ್ಥಿಸಿ, ಪಿ.ಎಸ್.ಜನಾರ್ಧನ್ ಸ್ವಾಗತಿಸಿ, ಅಂತೋಣಿ ಡಿಸೋಜಾ ನಿರೂಪಿಸಿ, ಹೆಚ್.ಎನ್.ಸುಬ್ರಮಣ್ಯ ವಂದಿಸಿದರು. ಸಮಿತಿ ವತಿಯಿಂದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.