ಜಿಲ್ಲೆ

ಬಾರದ ಮಳೆ, ಗಿಡ ನೆಡುವ ಕಾರ್ಯಕ್ಕೆ ಹಿನ್ನಡೆ

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಬಯಲು ಸೀಮೆಯ ಬರಗಾಲ ಕಳೆಯುತ್ತಿಲ್ಲ. ಕಳೆದ 10 ವರ್ಷಗಳಿಂದ ಮಳೆ ಆಧಾರಿತ ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ನಿಗದಿತ ಲಾಭವಿಲ್ಲ.

ಈ ವರ್ಷ ಮುಂಗಾರು ಮಳೆ ಆರಂಭದಲ್ಲೇ ಕುಂಠಿತವಾಗಿ ಕೃಷಿಗೆ ಹಿನ್ನಡೆಯಾಗಿದ್ದು, 75 ಹೆಕ್ಟೇರ್ ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.

ಪ್ರಸ್ತುತ ಮಳೆಗಾಲ ಆರಂಭಕ್ಕೆ 27,500 ಗಿಡ ನೆಡುವ ಗುರಿ ಇರಿಸಿಕೊಂಡಿದ್ದ ಅರಣ್ಯ ಇಲಾಖೆಯಲ್ಲಿ ತಪಸಿ, ಬಸರಿ, ಆಲ, ಅರಳಿ, ಬೀಟೆ, ರಕ್ತ ಚಂದನ, ಹಲಸು, ನೇರಳೆ, ಹೊಂಗೆ, ಚಳ್ಳೆ, ಸೀತಾಫಲ, ಕಮರ, ಹೊನ್ನೆ, ಬಾಗೆ, ಸೀಮಾರೂಬ ಮತ್ತು ತಾರೆ ಪ್ರಭೇದ ಗಿಡಗಳನ್ನು ಪೋಷಿಸಲಾಗುತ್ತಿದೆ.

ಮಳೆ ಆರಂಭವಾದ ಕೂಡಲೇ ಗಿಡ ನೆಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೀಗ ಮಳೆ ಬಾರದ್ದಕ್ಕೆ ಗಿಡನೆಡುವ ಕಾರ್ಯ ಕೈಗೂಡುತ್ತೋ ಇಲ್ಲವೋ ಎನ್ನುವಂತಾಗಿದೆ.

ಅರಣ್ಯ ವಲಯ: ತಾಲೂಕಿನ 5009 ಪ್ರಾದೇಶಿಕ ಅರಣ್ಯ ವಲಯವನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿ ಓಬಳಾಪುರ ಕಾವಲು, ಜಾಜೂರು, ಪುಟ್ಲಾರಹಳ್ಳಿ, ದೊಡ್ಡ ಚೆಲ್ಲೂರು, ಎಎಂ ಕಾವಲು, ಅಲ್ಲಾಪುರ ಪ್ಲಾಂಟೇಷನ್ ಎಂದು ಗುರುತಿಸಲಾಗಿದೆ.

477 ಹೆಕ್ಟೇರ್ ಸೆಕ್ಷನ್ 4ರ ಅರಣ್ಯ ಪ್ರದೇಶವಾಗಿ ಬೋಗನಹಳ್ಳಿ ಅರಣ್ಯ, ನಾಗಗೊಂಡನಹಳ್ಳಿ, ವರವು ಕಾವಲು ಎಂದು ಪ್ರಾದೇಶಿಕ ಅರಣ್ಯ ಪೋಷಣೆಯಲ್ಲಿದೆ.

ಸಸಿಗಳ ಪೋಷಣೆ: ನಗರ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರೈತರಿಗಾಗಿ ವಿತರಿಸುವ ಗಿಡಗಳನ್ನು ಬೆಳೆಸುವ ಸಸ್ಯ ಕ್ಷೇತ್ರ ಇಲ್ಲಿದೆ. ಪ್ರಸ್ತುತ ರೈತರಿಗೆ ವಿತರಿಸಲು 1 ಲಕ್ಷದ 22 ಸಾವಿರ ಸಸಿಗಳನ್ನು ಬೆಳೆಸಲಾಗಿದೆ.

ರೈತರ ಜಮೀನುಗಳಿಗೆ ಬೇಡಿಕೆ ಇರುವ ಶ್ರೀಗಂಧ, ಮಹಗಾನಿ, ಕರಿಬೇವು, ಸಿಲ್ವರ್ ಒಕ್, ಕಾಡು ಬಾದಾಮಿ, ರಕ್ತ ಚಂದನ, ನುಗ್ಗೆ, ಹುಣಸೆ ತೇಗ ಮತ್ತು ಹಲಸು ಜಾತಿ ಗಿಡಗಳನ್ನು ಬೆಳೆಸಲಾಗಿದೆ.

ಕಳೆದ ಮೂರು ವರ್ಷ ಉತ್ತಮ ಮಳೆ ಬಿದ್ದ ಕಾರಣ, ಪ್ಲಾಂಟೇಷನ್ ಮಾಡಲಾಗಿದ್ದ ಗಿಡಗಳಲ್ಲಿ ಶೇ.90ರಷ್ಟು ಗಿಡಗಳು ಮರವಾಗಿ ಬೆಳೆದಿವೆ. ಪ್ರಸ್ತುತ ಮುಂಗಾರು ಕುಂಠಿತವಾಗಿ ಗಿಡ ನೆಡುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

ನಾಡಿಗೆ ಬರಗಾಲ ಆವರಿಸುವ ಹಿನ್ನೆಲೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಬೆಳೆಯಬೇಕಿದೆ.

ನಮ್ಮ ಸಮೀಪ ಇರುವ ಅರಣ್ಯವೇನು ಮಹಾದೊಡ್ಡ ಕಾಡಲ್ಲ ಎನ್ನುವ ನಿರ್ಲಕ್ಷ್ಯ ಭಾವ ತೊರೆದು, ಅರಣ್ಯದಲ್ಲಿನ ಪ್ರಾಣಿ-ಪಕ್ಷಿಗಳ ಸಂಕುಲದ ಬಗ್ಗೆ ಕಾಳಜಿ ಇರಬೇಕು. ಜತೆಗೆ ಕಾಡಿನಲ್ಲಿರುವ ಗಿಡ-ಮರಗಳ ಬೆಳವಣಿಗೆಗೆ ಇಲಾಖೆ ಕೈಗೊಳ್ಳುವ ಕಾರ್ಯ ಚಟುವಟಿಕೆಗಳಿಗೆ ಸಹಕರಿಸಬೇಕು.ಡಿ. ಬಹುಗುಣ, ವಲಯ ಅರಣ್ಯಾಧಿಕಾರಿ, ಚಳ್ಳಕೆರೆ