ಜಿಲ್ಲೆ

ಮಳೆ ನೀರು ಕೊಯ್ಲು ಕಡ್ಡಾಯ...

ಡಿಸಿ ಡಾ. ಕೆ.ವಿದ್ಯಾಕುಮಾರಿ ಸೂಚನೆ

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೊಳಿಸಲು ಮಳೆ ನೀರು ಕೊಯ್ಲು ಅಳವಡಿಕೆ ಅಗತ್ಯ. ಸರ್ಕಾರಿ ಸ್ವಾಮ್ಯದ ಎಲ್ಲ ತೆರೆದ ಹಾಗೂ ಕೊಳವೆ ಬಾವಿಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂನ್ 6ರಂದು ಆಯೋಜಿಸಿದ್ದ ಮಳೆ ನೀರು ಕೊಯ್ಲು ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದರೂ ಸಹ ಅಂತರ್ಜಲದ ಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕೆಳಭಾಗದಲ್ಲಿದೆ. ಹೀಗಾಗಿ ಮಳೆ ಕೊಯ್ಲು ಕಡ್ಡಾಯವಾಗಿ ಮಾಡಬೇಕಿದೆ ಎಂದರು.

ನಿರ್ಲಕ್ಷ್ಯಕ್ಕೆ ಅಸಮಾಧಾನ

ಜಿಲ್ಲೆಯಲ್ಲಿ ರೈತರು ಹಾಗೂ ಖಾಸಗಿಯವರು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿದ್ದಾರೆ. ಆದರೆ, ಸರ್ಕಾರದ ನೀರಿನ ಮೂಲಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅಳವಡಿಸಿರುವುದು ಕಂಡುಬಂದಿದೆ. ಕಳೆದ ವರ್ಷ ಈ ಬಗ್ಗೆ ಕಾರ್ಯಪ್ರವೃತ್ತರಾಗಲು ಸೂಚಿಸಿದ್ದೆ. ಆದರೆ, ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ಪ್ರಸಕ್ತ ಸಾಲಿನಲ್ಲಿ ಒಟ್ಟು ಬಾವಿಗಳಲ್ಲಿ ಶೇ.50ಕ್ಕೆ ಮಳೆ ನೀರು ಕೊಯ್ಲು ಅಳವಡಿಸಲೇಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ ಬಾಯಲ್​, ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಉದಯಕುಮಾರ್​, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು, ತಾಪಂ ಇಒಗಳು ಉಪಸ್ಥಿತರಿದ್ದರು.

ಕಾಮಗಾರಿಗೆ ಅನುದಾನ ಬಳಸಿಕೊಳ್ಳಿ

ಜಿಲ್ಲೆಯಲ್ಲಿ ಒಟ್ಟು 1,616 ಸರ್ಕಾರಿ ತೆರೆದ ಹಾಗೂ ಕೊಳವೆಬಾವಿಗಳಿದೆ. ಆದರೆ, 44ಕ್ಕೆ ಮಾತ್ರ ಮಳೆ ನೀರು ಕೊಯ್ಲು ಅಳವಡಿಕೆಯಾಗಿದೆ. ಬಾಕಿ ಉಳಿದ 1,572 ಬಾವಿಗಳಿಗೆ ಅಳವಡಿಕೆ ಮಾಡಲು ತಾಪಂ ಹಾಗೂ ಸ್ಥಳಿಯ ಸಂಸ್ಥೆಗಳು ಕ್ರಮಕೈಗೊಳ್ಳಬೇಕು. ವ್ಯವಸ್ಥೆ ಅಳವಡಿಸಲು ಗ್ರಾಪಂಗಳ 15ನೇ ಹಣಕಾಸು ಹಾಗೂ ಟಾಸ್ಕ್​ೋರ್ಸ್​ನ ಅನುದಾನ ಬಳಸಿಕೊಳ್ಳಬಹುದು. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ, ನೀರಿನ ಸಮಸ್ಯೆ ಉಂಟಾದ ಗ್ರಾಮಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಬೇಕು ಎಂದು ಡಿಸಿ ವಿದ್ಯಾಕುಮಾರಿ ತಾಕೀತು ಮಾಡಿದರು.

ಭವಿಷ್ಯದಲ್ಲಿ ವಾಡಿಕೆಯ ಮಳೆಯಾಗದೆ ಬರ ಪರಿಸ್ಥಿತಿ ಉಂಟಾಗಬಹುದು. ಹೀಗಾಗಿ ಮಳೆ ನೀರು ಕೊಯ್ಲು ಅಳವಡಿಕೆಯಿಂದ ಟ್ಯಾಂಕರ್​ ಮೂಲಕ ನೀರು ಪೂರೈಸುವುದನ್ನು ತಪ್ಪಿಸಬಹುದು. ಕೆಲವು ಬೋರ್​ಗಳಲ್ಲಿ ಉಪ್ಪು ನೀರು ಬಂದಿದ್ದರೂ ಸಹ ಮಳೆ ನೀರು ಕೊಯ್ಲು ಅಳವಡಿಕೆಯಿಂದ ಸಿಹಿ ನೀರು ಲಭ್ಯವಾಗಬಹುದು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ