Invitation to a poetry competition 
ಜಿಲ್ಲೆ

ಸಾಯಿ ಲೇಔಟ್‌ನಿಂದ ಮಳೆನೀರು ತೆರವು

ಆರ್.ತುಳಸಿಕುಮಾರ್

ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಸಮಸ್ಯೆಗೆ ಒಳಗಾಗಿದ್ದ ಕೆ.ಆರ್.ಪುರ ಬಳಿಯ ಸಾಯಿ ಲೇಔಟ್‌ನಲ್ಲಿ ಸಂಗ್ರಹವಾಗಿದ್ದ ಮಳೆನೀರನ್ನು ಸಂಪೂರ್ಣವಾಗಿ ಹೊರಹಾಕಲಾಗಿದೆ.

ಕಳೆದೊಂದು ವಾರದಿಂದ ಈ ಬಡಾವಣೆಯ ಬಹುತೇಕ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಎದುರಾಗಿತ್ತು. 600ಕ್ಕೂ ಹೆಚ್ಚು ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಿ ವಸತಿ, ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಕ್ರಮೇಣ ಅಲ್ಲಿನ ಜನಜೀವನ ಹಿಂದಿನ ಸ್ಥಿತಿಗೆ ಮರಳುತ್ತಿದೆ. ಮಳೆನೀರು ಸಂಗ್ರಹದಿಂದ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರಿಗೆ ವೈದ್ಯಕೀಯ ತಪಾಸಣೆ ಹಾಗೂ ಅಗತ್ಯ ಔಷಧವನ್ನು ಪಾಲಿಕೆಯಿಂದ ವಿತರಿಸಲಾಗಿತ್ತು.

ಇದರ ಹೊರತಾಗಿಯೂ ಲೇಔಟ್‌ನ ವಿವಿಧ ರಸ್ತೆಗಳಲ್ಲಿ ತ್ಯಾಜ್ಯ ಸಂಗ್ರಹಗೊಂಡಿದೆ. ಜತೆಗೆ ಚರಂಡಿಗಳಲ್ಲೂ ಹೂಳು ತುಂಬಿದ್ದು, ಇನ್ನಷ್ಟೇ ಹೊರತೆಗೆಯಬೇಕಿದೆ. ಈ ಎರಡೂ ಕೆಲಸವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ ವಾರ ಸಿಎಂ, ಡಿಸಿಎಂ ಅವರು ಮಳೆಹಾನಿ ಪ್ರದೇಶಗಳ ಪರಿಶೀಲನೆ ವೇಳೆ ಸಾಯಿ ಲೇಔಟ್‌ಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದರು. ಆ ವೇಳೆ ಸಂತ್ರಸ್ಥರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಇದರ ಹೊರತಾಗಿಯೂ ಇನ್ನೂ ಕೆಲ ಕಾಮಗಾರಿಗಳು ಬಾಕಿ ಉಳಿದಿವೆ. ಇವುಗಳಿಗೆ ಚುರುಕು ನೀಡುವ ಕೆಲಸ ಅಧಿಕಾರಿಗಳಿಂದ ಆಗಿಲ್ಲ ಎಂಬ ಆಕ್ಷೇಪ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಸಾಯಿ ಲೇಔಟ್ ಹೊರಗಡೆ ಸ್ವಚ್ಛತೆಗೆ ಚಾಲನೆ:

ಭಾರಿ ಮಳೆಯಾದಾಗ ಸಾಯಿ ಲೇಔಟ್ ಸಮಿಪವಿರುವ ರೈಲ್ವೆ ವೆಂಟ್ ಬಳಿಯಿರುವ ಬೃಹತ್ ರಾಜಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಮುಂದೆ ಹೋಗುತ್ತಿಲ್ಲ. ಇಲ್ಲೀಗ ಸಂಗ್ರವಾಗಿದ್ದ ಹೂಳನ್ನು ಹೊರಹಾಕಲು ಚಾಲನೆ ದೊರೆತಿದೆ. ಜತೆಗೆ ರಾಜಕಾಲುವೆ ಬಳಿಯಿರುವ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದೆ. ಈ ಕಾರ್ಯ ಮುಗಿಯುತ್ತಿದ್ದಂತೆ ಸಾಯಿ ಲೇಔಟ್ ಒಳಗಿನ ಚರಂಡಿಗಳನ್ನೂ ಸ್ವಚ್ಛಗೊಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.