ನರಗುಂದ/ಶಿರೋಳ: ಕಳೆದೊಂದು ವಾರದಿಂದ ಬಿಟ್ಟೂಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಬಿಡುವು ನೀಡಿದೆ. ಆದರೆ, ನವಿಲುತೀರ್ಥ ಜಲಾಶಯದಿಂದ ಹರಿಬಿಟ್ಟಿರುವ ಮಲಪ್ರಭೆಯ ನೀರು ಗಡಿಗ್ರಾಮ ಲಖಮಾಪುರದ ಮನೆಗಳ ಬಾಗಿಲವರೆಗೆ ಬಂದು ನಿಂತಿದೆ. ವಿವಿಧ ಗ್ರಾಮಗಳಲ್ಲಿ ನೆರೆಯ ಭೀತಿ ಮುಂದುವರಿದಿದೆ.
ಸವದತ್ತಿ ಜಲಾಶಯದಿಂದ ಬಾಳೇಕುಂದ್ರಿ ಎಂಎಲ್‌ಬಿಸಿ ಕಾಲುವೆಗೆ 200 ಕ್ಯೂಸೆಕ್, ಎಂಆರ್‌ಬಿಸಿ ಕಾಲುವೆಗೆ 200 ಕ್ಯೂಸೆಕ್, ನರಗುಂದ ಬ್ಯಾಕ್ (ಎನ್‌ಬಿಸಿ) ಕಾಲುವೆಗೆ 200 ಕ್ಯೂಸೆಕ್ ಹಾಗೂ ತಾಲೂಕಿನ ಕೊಣ್ಣೂರಿನ ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಬುಧವಾರ ಒಟ್ಟು 12,752 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಪ್ರವಾಹದಿಂದ ತಾಲೂಕಿನ ಶಿರೋಳ- ಕಿತ್ತಲಿ, ಕೊಣ್ಣೂರ- ಗೋವನಕೊಪ್ಪ ಸೇತುವೆ ಸಂಪೂರ್ಣ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಲಖಮಾಪೂರ, ಕೊಣ್ಣೂರ, ವಾಸನ, ಬೆಳ್ಳೇರಿ, ಬೂದಿಹಾಳ, ಕಲ್ಲಾಪೂರ, ಶಿರೋಳ, ಗುಳಗಂದಿ, ಮೆಣಸಗಿ ಹಾಗೂ ಕಪ್ಪಲಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.ಪ್ರವಾಹಪೀಡಿತ ಸ್ಥಳಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ, ಕೊಣ್ಣೂರ ಹೋಬಳಿ ಕಂದಾಯ ನಿರೀಕ್ಷಕ ಈರಣ್ಣ ಕಳಸಣ್ಣವರ, ಮೋಹನ ಉಪವಾಸಿ, ಪ್ರದೀಪ ಕದಂ, ಪಿಡಿಒ ಮಲ್ಲಪ್ಪ ವಾಲಿ, ಮಂಜುನಾಥ ಗಣಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.