ಚಾಮರಾಜನಗರ: ಯಳಂದೂರು ತಾಲೂಕಿನ ಪ್ರಸಿದ್ಧ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದಲೂ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅರಣ್ಯವೆಲ್ಲ ತಂಪಾಗಿದ್ದು ಮರಗಿಡಗಳು ಚಿಗುರತೊಡಗಿವೆ.
ಕಳೆದ ಮೂರು ತಿಂಗಳಿಂದಲೂ ಕಾಡಿನ ಭಾಗದಲ್ಲಿ ಮಳೆಯಾಗಿರಲಿಲ್ಲ. ಕುರುಚಲು, ನಿತ್ಯ ಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ, ಶೋಲಾ, ಎಲೆ ಉದುರುವ ಕಾಡು ಸೇರಿದಂತೆ ವಿಭಿನ್ನ ಅರಣ್ಯ ಪ್ರದೇಶವನ್ನು ಒಟ್ಟಾಗಿ ತನ್ನೊಡಲಲ್ಲಿ ಇಟ್ಟುಕೊಂಡಿರುವ ಈ ಕಾಡು ಒಣಗಿತ್ತು. ಅಲ್ಲದೇ, ಈ ಕಾನನದಲ್ಲಿ ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮ ಸೇರಿದಂತೆ ವಿವಿಧ ಮೃಗಗಳು, ಪಶು-ಪಕ್ಷಿಗಳು ಕಂಡು ಬರುತ್ತವೆ. ಇಲ್ಲಿ ನೂರಾರು ಕೆರೆ-ಕಟ್ಟೆಗಳಿದ್ದು ಮಳೆ ಇಲ್ಲದೆ ಇವೆಲ್ಲ ಬತ್ತಿಹೋಗಿದ್ದವು. ಇದೀಗ ಮಳೆಯಾಗುತ್ತಿದ್ದು ಅಲ್ಲಲ್ಲಿ ಅಲ್ಪ-ಸ್ವಲ್ಪ ನೀರು ಸಂಗ್ರಹವಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಕೆರೆಗಳಿಗೆ ಮತ್ತಷ್ಟು ನೀರು ಸೇರಲಿದೆ.
ಕಳೆದ 15 ದಿನಗಳ ಹಿಂದೆ ಬೆಟ್ಟದಲ್ಲಿ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿತ್ತು. ನಾಲ್ಕು ದಶಕಗಳ ಹಿಂದೆ ಕಂಡು ಬಂದಿದ್ದ ಬಿಸಿಲು ಈ ಕಾಡನ್ನು ಈ ವರ್ಷ ಆವರಿಸತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಅಲ್ಲಲ್ಲಿ ಕಾಡ್ಗಿಚ್ಚು ಕೂಡ ಕಾಣಿಸಿಕೊಂಡಿತ್ತು. ಆದರೆ ಈಗ ಮಳೆಯಾಗುತ್ತಿದ್ದು ಉಷ್ಣಾಂಶ 30 ಡಿಗ್ರಿಗೆ ಇಳಿಕೆಯಾಗಿದೆ. ಅಲ್ಲದೆ, ಮಳೆಯಿಂದ ಕಾಡಿನ ಗಿಡಮರಗಳು ಚಿಗುರೊಡೆಯುತ್ತಿವೆ. ಹುಲ್ಲು ಚಿಗುರೊಡೆಯುತ್ತಿದ್ದು ಚಿಗರೆ, ಕಾಡೆಮ್ಮೆ ಸೇರಿದಂತೆ ಇತರೆ ಸಸ್ಯಹಾರಿ ಪ್ರಾಣಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
ನೀರು ಅರಸಿ ಕಿ.ಮೀ.ಗಟ್ಟಲೆ ಹೋಗುತ್ತಿದ್ದ ಪ್ರಾಣಿಗಳಿಗೂ ನೀರು ಲಭಿಸುತ್ತಿದೆ. ಅಲ್ಲದೆ ಕಾಡಂಚಿನ ಗ್ರಾಮಗಳ ರೈತರ ಜಮೀನಿಗೆ ಲಗ್ಗೆ ಇಡುವ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ ವನ್ಯಪ್ರೇಮಿ ಮನು, ಮಹೇಶ್.