ಜಿಲ್ಲೆ

ಗುಡುಗು ಮಿಂಚು ಸಹಿತ ಮಳೆಯಬ್ಬರ, ಹೊಸಕೋಟೆ ತಾಲೂಕಿನಲ್ಲಿ ಆಲಿಕಲ್ಲು ಮಳೆ, ಬುಡಸಹಿತ ಧರೆಗುರುಳಿದ ಅರಳಿ ಮರ

Bengaluru Rural

ಬೆಂಗಳೂರು ಗ್ರಾಮಾಂತರ: ಕಳೆದೆರಡು ದಿನಗಳಿಂದ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮಳೆರಾಯ ಶುಕ್ರವಾರ ಸಂಜೆ ಆರ್ಭಟಿಸಿದ್ದಾನೆ.

ಹೊಸಕೋಟೆ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಸುರಿದಿದೆ.

ಸೂಲಿಬೆಲೆ ಹೋಬಳಿ ಯನಗುಂಟೆ ಗ್ರಾಮದಲ್ಲಿ ಪುರಾತನ ಅಶ್ವತ್ಥ ಮರ ಬುಡಮೇಲಾಗಿದ್ದು ನಾಲ್ಕಾರು ಮನೆಗಳಿಗೆ ಹಾನಿಯಾಗಿದೆ. ಸೂಲಿಬೆಲೆಯ ಸಂತೆ ಮೈದಾನದ ಬಳಿ ಮರವೊಂದು ನೆಲಕ್ಕುರುಳಿ ಬೈಕ್ ಜಖಂಗೊಂಡಿದೆ. ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲೂ ವರ್ಷಧಾರೆಯಾಗಿದೆ. ದೇವನಹಳ್ಳಿ ತಾಲೂಕಿನ ವಿವಿಧೆಡೆ ಮಳೆ ಆರ್ಭಟಿಸಿದೆ. ಬಿರುಗಾಳಿ ಸಹಿತ ಮಳೆಗೆ ರಸ್ತೆ ಬದಿಯ ಮರಗಳು ಧರೆಗುರುಳಿವೆ. ನೆಲಮಂಗಲದಲ್ಲೂ ತುಂತುರು ಮಳೆಯಾಗಿದೆ.

ಧಾರಾಕಾರ ಮಳೆ: ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಸಂಜೆ 6 ಗಂಟೆಯಿಂದ 2 ಗಂಟೆ ಸುರಿದ ಮಳೆಗೆ ಜನಜೀವನ ಅಸ್ತವ್ಯವಸ್ಥಗೊಂಡಿತ್ತು. ದೈನಂದಿನ ಕೆಲಸ ಕಾರ್ಯಗಳಿಂದ ಮನೆಗೆ ಮರಳುತ್ತಿದ್ದ ಜನ ಮಳೆಗೆ ಸಿಲುಕಿ ಪರದಾಡಿದರು. ಚರಂಡಿಗಳು ತುಂಬಿ ರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು. ನಗರ ಭಾಗಗಳಲ್ಲಿ ವಾಹನದಟ್ಟಣೆ ಕಂಡುಬಂತು.

ಸೂಲಿಬೆಲೆಯಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಸಾರ್ವಜನಿಕರು ಆಲಿಕಲ್ಲು ಸಂಗ್ರಹಿಸುತ್ತ ಸಂಭ್ರಮಿಸಿದ ದೃಶ್ಯ ಕಂಡುಬಂತು.

ಮುರಿದು ಬಿದ್ದ ವಿದ್ಯುತ್ ಕಂಬಗಳು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಪಾಲಿಹೌಸ್‌ಗಳಿಗೆ ಹಾನಿಯಾಗಿದೆ. ಸೋಮತ್ತನಹಳ್ಳಿ ಗ್ರಾಮದ ಬೂದಿಗೆರೆ ರಸ್ತೆಯಲ್ಲಿ 4 ಮರಗಳು ಧರೆಗುರುಳಿವೆ. ಚೌಡಪ್ಪನಹಳ್ಳಿಯಲ್ಲಿ ಮನೆಯ ಶೀಟ್‌ಗಳು ಹಾರಿವೆ. ಗುಡ್ಡಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಮುನ್ನೆಚ್ಚರಿಕೆಯಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು. ನಾಲ್ಕೈದು ತಾಸು ವಿದ್ಯುತ್ ಇರಲಿಲ್ಲ.

ತುಂಬಿ ಹರಿದ ಕಾಲುವೆಗಳು: ಸೂಲಿಬೆಲೆಯ ಗಿಡ್ಡಪ್ಪನಹಳ್ಳಿ ಕೆರೆ ಸೇರಿ ವಿವಿಧೆಡೆ ಅನೇಕ ಕೆರೆಗಳಿಗೆ ನೀರು ಹರಿದಿದೆ. ವರ್ಷದಿಂದ ಬರಿದಾಗಿದ್ದ ಕೆರೆಕುಂಟೆಗಳಲ್ಲಿ ಜೀವಸೆಲೆ ಕಾಣಿಸಿಕೊಂಡಿದೆ.