ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 2 ದಿನ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೊಡಗಿನ ಗೋಣಿಕೊಪ್ಪ, ಮೈಸೂರಿನ ಹುಣಸೂರು, ಯಾದಗಿರಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ವರ್ಷಧಾರೆಯಾಗಿದೆ. ಕೆಲವಡೆ ಮಳೆ ಸುರಿದ ಕಾರಣ ಪಟಾಕಿ ಸಿಡಿಸಲು ತೊಂದರೆಯಾಯಿತು. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮುಂದಿನ 2 ದಿನ ಗುಡುಗು ಮಿಂಚು ಸಹಿತ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ನ.6ರಿಂದ ರಾಜ್ಯದಲ್ಲೆಡೆ ಮಳೆ ಕ್ಷೀಣವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮಂಜು ಕವಿದ ವಾತಾವರಣ:ಹಿಂಗಾರು ಕ್ಷೀಣವಾಗುತ್ತಿರುವ ಬೆನ್ನಲ್ಲೇ ಮೈಸೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಂಜು ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದೆ. ನಸುಕಿನ ವೇಳೆ ದಟ್ಟವಾದ ಮಂಜಿನ ವಾತಾವರಣ ಇರುತ್ತಿದೆ. ಇದರಿಂದಾಗಿ ವಾಹನ ಸವಾರರು ನಿಧಾನವಾಗಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಪ್ರತಿ ನಿತ್ಯ ವಾಗಿಂಗ್ ತೆರಳುವವರಿಗೆ ಅಡಚಣೆಯಾಗುತ್ತಿದೆ.
ರಾಜ್ಯಾದ್ಯಂತ ಈಗಾಗಲೇ ಮಳೆ ಇಳಿಮುಖವಾಗಿದೆ. ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಾತ್ರ ತುಸು ಬಿರುಸಾಗಿ ಸುರಿಯಲಿದೆ.ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 30-31 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಬೆಳಗ್ಗಿನ ಜಾವ ಚಳಿ ಜೊತೆಗೆ ಮಂಜು ಕವಿದ ವಾತಾವರಣವೂ ಕಾಣಿಸಿಕೊಳ್ಳುತ್ತಿದೆ.
| ಡಾ.ಶ್ರೀನಿವಾಸರೆಡ್ಡಿ. ಹವಾಮಾನ ತಜ್ಞ.