ಇನೋಳಿಯಲ್ಲಿ ವಿದ್ಯುತ್ ಕಂಬ ಬಿದ್ದಿರುವುದು 
ಜಿಲ್ಲೆ

ರಾಜ್ಯದ 17 ಜಿಲ್ಲೆಗಳಲ್ಲಿ ಮಳೆ ಕೊರತೆ: ಕರಾವಳಿ, ಮಲೆನಾಡಲ್ಲಿ ಅಧಿಕ ವರ್ಷಧಾರೆ

ಬೆಂಗಳೂರು:ವಾಡಿಕೆಗಿಂತ ಮುನ್ನ ನೈಋತ್ಯ ಮಾನ್ಸೂನ್(ಮುಂಗಾರು)ಪ್ರವೇಶಿಸಿದ್ದರೂ ಪ್ರಸಕ್ತ ತಿಂಗಳಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ.

2025ರ ಮೇ 24ರಂದು ರಾಜ್ಯಕ್ಕೆ ಮಾರುತ ಪ್ರವೇಶಿಸಿತ್ತು.15 ವರ್ಷದ ಬಳಿಕ ವಾಡಿಕೆಗಿಂತ 12 ದಿನ ಮುಂಚಿತವಾಗಿ ಆಗಮಿಸಿದ್ದ ಪರಿಣಾಮ ರೈತರ ಮೊಗದಲ್ಲಿ ಮಂದಹಾಸ ಬೀರಿತ್ತು. ಆರಂಭದಲ್ಲಿ ರಾಜ್ಯದಲ್ಲೆಡೆ ಧಾರಾಕಾರವಾಗಿ ಮಳೆಯಾಯಿತು. ಈ ಸಂದರ್ಭದಲ್ಲಿ ಜಮೀನು ಹಸನಗೊಳಿಸಿ ಮೆಕ್ಕೆಜೋಳ ಸೇರಿ ಹಲವು ಬೀಜ ಬಿತ್ತಲಾಗಿತ್ತು. ಇದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿತ್ತು. ಆದರೆ, ಮಾನ್ಸೂನ್ ದುರ್ಬಲಗೊಂಡ ಪರಿಣಾಮದಿಂದ ಜೂ.1ರಿಂದ ಜೂ.28ರವರೆಗೆ ಕರಾವಳಿ,ಮಲೆನಾಡು ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿದೆ.

ಎಲ್ಲೆಲ್ಲಿ ಮಳೆ ಕುಂಠಿತ?

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಮಂಡ್ಯ,ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ,ಬಳ್ಳಾರಿ, ರಾಯಚೂರು,ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂ.1ರಿಂದ ಜೂ.28ರವರೆಗೆ ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಯಂತೆ 61 ಮಿಮೀ ಮಳೆಯಾಗಬೇಕಿತ್ತು. ಆದರೆ, 48 ಮಿಮೀ ಸುರಿದಿದ್ದು, ಶೇ.21 ಕುಂಠಿತವಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಸುರಿದಿದೆ. ಆದರೂ, ಕೆಲ ಜಿಲ್ಲೆಗಳಲ್ಲಿ ಕೊರತೆಯಾಗಿದೆ.

ಎಲ್ಲೆಲ್ಲಿ ಅಧಿಕ

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ.ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಭರ್ಜರಿ ವರ್ಷಧಾರೆಯಾಗಿದೆ.

ಜುಲೈನಲ್ಲಿ ಅಧಿಕ ಮಳೆ?

ಈ ಬಾರಿ ಮುಂಗಾರು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಜೂ.1ರಿಂದ ಸೆ.30ರವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಜೂನ್‌ನಲ್ಲಿ ವಾಡಿಕೆಯಷ್ಟೇ ಸುರಿದರೆ, ಜುಲೈನಿಂದ ಅಧಿಕವಾಗಿ ಸುರಿಯಲಿದೆ. ಕಳೆದ ವರ್ಷ ‘ಲಾ-ನಿನಾ’ ಪರಿಣಾಮದಿಂದ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ೆಸಿಫಿಕ್ ಮತ್ತು ಹಿಂದು ಮಹಾಸಾಗರದಲ್ಲಿ ‘ಲಾ-ನಿನಾ’ ತಟಸ್ಥವಾಗಿದೆ. ಹಿಂದು ಮಹಸಾಗರದ ದ್ವಿಧ್ರುವಿ (ಐಒಸಿ) ಪರಿಸ್ಥಿತಿಯೂ ತಟಸ್ಥವಾಗಿದೆ. ಈ ಎಲ್ಲ ಕಾರಣಗಳಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೆ, ಕರಾವಳಿ ಹಾಗೂ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕವಾಗಿ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಹೇಳಿದೆ.

ಮಾರುತಗಳು ಪ್ರವೇಶಿಸುವ ವೇಳೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಭರಿತ ಮೋಡಗಳಿದ್ದವು. ಈ ಕಾರಣದಿಂದ ಧಾರಾಕಾರವಾಗಿ ಮಳೆಯಾಗಿತ್ತು. ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ಭಾರತದಲ್ಲಿದ್ದ ಮಾನ್ಸೂನ್ ಉತ್ತರ ಭಾರತದತ್ತ ವ್ಯಾಪಿಸುತ್ತಿದೆ. ಅರಬ್ಬಿಸಮುದ್ರ, ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮಾನ್ಸೂನ್ ಬಲಗೊಳ್ಳುವುದಕ್ಕೆ ಪೂರಕ ವಾತಾವರಣ ಇಲ್ಲ. ಹೀಗಾಗಿ, ಮಾನ್ಸೂನ್ ದುರ್ಬಲವಾಗಿ ಮಳೆ ಕೊರತೆಯಾಗಿದೆ.

ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.