ಬೆಂಗಳೂರು:ಹಲವು ದಿನಗಳಿಂದ ರಾಜ್ಯದಲ್ಲೆಡೆ ಆರ್ಭಟಿಸುತ್ತಿದ್ದ ಮಳೆ, ಬುಧವಾರದಿಂದ ಇಳಿಮುಖವಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆ.21ರಿಂದ ಆ.26ರವರೆಗೆ ಒಣಹವೆ ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.
ಮುಂಗಾರು ಪ್ರಬಲವಾಗಿದ್ದ ಕಾರಣ 20 ದಿನದಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ. ಆ.1ರಿಂದ ಆ.20ರವರೆಗೆ ರಾಜ್ಯಾದ್ಯಂತ 158 ಮಿಮೀ ಮಳೆಯಾಗಬೇಕಿತ್ತು. ಆದರೆ, 186 ಮಿಮೀ ಸುರಿದಿದ್ದು, ಶೇ.18 ವಾಡಿಕೆಗಿಂತ ಅಧಿಕ ಸುರಿದಿದೆ. ಆದರೂ,ಕರಾವಳಿ, ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ಶೇ.20 ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಬಿದ್ದಿದೆ.
ಈ ಅವಧಿಯಲ್ಲಿ ಬೆಂ.ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಗದಗ, ವಿಜಯಪುರ, ಬೀದರ್, ಬೆಳಗಾವಿ, ಕೊಪ್ಪಳ ಮತ್ತು ಬಾಗಲಕೋಟೆ ಸೇರಿ ರಾಜ್ಯದ 20 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 5 ಜಿಲ್ಲೆಗಳಲ್ಲಿ ಕೊರತೆಯಾಗಿದೆ.
ಉತ್ತಮ ಮುಂಗಾರು ಕಾರಣ ಜು.25ರವರೆಗೆ ರಾಜ್ಯಾದ್ಯಂತ 63.19 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ. ಭತ್ತ, ಜೋಳ, ಮೆಕ್ಕೆಜೋಳ, ರಾಗಿ, ಸಜ್ಜೆ, ಗೋಧಿ, ತೃಣಧಾನ್ಯಗಳು 22.92 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ ಸೇರಿ ಒಟ್ಟು ದ್ವಿದಳ ಆಹಾರ ಧಾನ್ಯಗಳು 41.76 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ ಸೋಯಾ ಅವರೆ, ಅಗಸೆಯನ್ನು 6.40 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಹಾಗೂ ಹತ್ತಿ, ಕಬ್ಬು ಮತ್ತು ತಂಬಾಕು ಬೆಳೆಗಳನ್ನು ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ತಿಂಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬೆಳೆಗಳು ಫಸಲಿಗೆ ಬರುತ್ತಿವೆ.