ಜಿಲ್ಲೆ

ಮಳೆ ಆರ್ಭಟಕ್ಕೆ 67 ಹೆಕ್ಟೇರ್ ಬೆಳೆ ನಾಶ: ಜಿಲ್ಲಾಡಳಿತದಿಂದ ನಷ್ಟ ಪಟ್ಟಿ ಸಿದ್ಧ

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನಲ್ಲಿ ಆರ್ಭಟಿಸಿದ ಮಳೆರಾಯ ಕೆರೆ-ಕುಂಟೆಗಳನ್ನು ತುಂಬಿಸಿ ಕೋಡಿ ಹರಿಸಿ ಜನರನ್ನು ಸಂತೃಪ್ತಗೊಳಿಸಿದ ಜತೆಜತೆಗೆ ಬೆಳೆಹಾನಿಗೂ ಕಾರಣವಾಗಿದ್ದಾನೆ. ಜೂನ್‌ನಿಂದ ಸುರಿದ ಮಳೆಗೆ ತೋಟಗಾರಿಕೆ ಬೆಳೆಗಾರರು ಹಾಗೂ ಕೃಷಿಕರು ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ಜಿಲ್ಲೆಯಲ್ಲಿ 61.31 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾಗೂ 6.13 ಹೆಕ್ಟೇರ್‌ನಲ್ಲಿ ಇನ್ನಿತರ ಬೆಳೆಗಳು ನೀರುಪಾಲಾಗಿದೆ.


ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕೈದು ವರ್ಷದಿಂದ ಮಳೆರಾಯ ಕೃಪೆ ತೋರಿದ್ದು, ದಶಕಗಳಿಂದ ನೀರಿನ ಪಸೆಯನ್ನೇ ಕಾಣದ ಅದೆಷ್ಟೋ ಕೆರೆಗಳು ಕೋಡಿ ಹರಿದಿವೆ. ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಕೋಡಿ ಬಿದ್ದ ಕೆರೆಗಳಿಗೆ ಬಾಗಿನ ಅರ್ಪಿಸಲು ಮುಗಿಬಿದ್ದಿದ್ದರೆ, ಮತ್ತೊಂದೆಡೆ ಅದೇ ನೀರು ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿರುವ ದೃಶ್ಯಗಳು ಕಂಡುಬರುತ್ತಿವೆ. ದಶಕದಲ್ಲೇ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆಯಾಗಿದ್ದು, ಮಳೆಹಾನಿ ಸಂಬಂಧ ಜಿಲ್ಲಾಡಳಿತ ನಷ್ಟದ ಪಟ್ಟಿ ಸಿದ್ಧಪಡಿಸಿದೆ.

ಪರಿಹಾರಕ್ಕೆ ದಾಖಲೆ ಸಂಗ್ರಹ: ಪ್ರಸಕ್ತ ಜೂನ್‌ನಿಂದ ಆರಂಭವಾದ ಮಳೆ ಇದುವರೆಗೆ ನಾಲ್ವರನ್ನು ಬಲಿ ಪಡೆದಿದೆ. ಹೊಸಕೋಟೆ ತಾಲೂಕಿನಲ್ಲಿ ಕೂಲಿ ಅರಸಿ ಬಂದಿದ್ದ ವಲಸೆ ಕಾರ್ಮಿಕರ ಪೈಕಿ ಮೂವರು ವೇರ್‌ಹೌಸ್‌ನ ಕಾಂಪೌಂಡ್ ಕುಸಿದು ಮೃತಪಟ್ಟರೆ, ಇದೇ ತಾಲೂಕಿನ ಹಿರಿಯ ನಾಗರಿಕರೊಬ್ಬರು ದನದಕೊಟ್ಟಿಗೆ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈಗಾಗಲೇ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.

ಧರೆಗುರುಳಿದ ವಿದ್ಯುತ್ ಕಂಬಗಳು: ಬಿರುಗಾಳಿ ಮಳೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಹಾನಿಗೊಳಲಾಗಿವೆ. ದೊಡ್ಡಬಳ್ಳಾಪುರದಲ್ಲಿ 51, ನೆಲಮಂಗಲ 86, ಹೊಸಕೋಟೆ 59 ದೇವನಹಳ್ಳಿಯಲ್ಲಿ 133 ವಿದ್ಯುತ್ ಕಂಬಗಳು ಹಾನಿಯಾಗಿವೆ, ಜಿಲ್ಲೆಯಲ್ಲಿ 329 ವಿದ್ಯುತ್ ಕಂಬಗಳು ಹಾನಿಯಾಗಿವೆ. ಇವುಗಳಲ್ಲಿ ಪ್ರಸ್ತುತ 22 ವಿದ್ಯುತ್ ಕಂಬಗಳ ದುರಸ್ತಿ ಪೂರ್ಣಗೊಂಡಿದ್ದು, ಉಳಿದ ಕಂಬಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಹಾನಿ: ದೊಡ್ಡಬಳ್ಳಾಪುರದಲ್ಲಿ 10, ನೆಲಮಂಗಲದಲ್ಲಿ 17, ದೇವನಹಳ್ಳಿ ತಾಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಹೊಸಕೋಟೆಯೊಂದರಲ್ಲಿ ಬರೋಬ್ಬರಿ 73 ಮನೆಗಳು ಭಾಗಶಃ ಹಾನಿಯಾಗಿದ್ದು, ಜಿಲ್ಲೆಯಲ್ಲಿಯೇ ಹೆಚ್ಚು ಹಾನಿಯಾದ ತಾಲೂಕು ಎನಿಸಿದೆ. ಭಾಗಶಃ ಶಿಥಿಲಗೊಂಡಿರುವ ಮನೆಗಳ ತೆರವು ಕಾರ್ಯಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಮುಂದಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ.


ಜಿಲ್ಲೆಯಲ್ಲಿ ಬೆಳೆ ಹಾನಿ ಹಾಗೂ ಮನೆಹಾನಿ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಸರ್ವೇ ನಡೆಸಲಾಗಿದ್ದು, ಪಟ್ಟಿ ಸಿದ್ಧಪಡಿಸಲಾಗಿದೆ, ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದು, ಪರಿಹಾರ ಶೀಘ್ರ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ.

| ಎಂಟಿಬಿ ನಾಗರಾಜ್ ಪೌರಾಡಳಿತ ಸಚಿವ


ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಕಂದಾಯ ಇಲಾಖೆ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದು ಮಳೆಹಾನಿ ಸಂಬಂಧ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತ ದಾಖಲೆಗಳನ್ನು ಕಲೆಹಾಕುತ್ತಿದ್ದು ಶೀಘ್ರ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ.
| ಆರ್.ಲತಾ ಜಿಲ್ಲಾಧಿಕಾರಿ