ಜಿಲ್ಲೆ

ಮಳೆ-ಗಾಳಿಯಿಂದಾದ ಹಾನಿ ಪರಿಶೀಲನೆ

ವಿವೇಕಾನಂದ ದಾಸನಕೊಪ್ಪ

ರಟ್ಟಿಹಳ್ಳಿ: ಭಾನುವಾರ ಸುರಿದ ಭಾರಿ ಮಳೆ-ಗಾಳಿಗೆ ಹಾನಿಯಾದ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಯು.ಬಿ. ಬಣಕಾರ ಮತ್ತು ಬಿಇಒ ಶ್ರೀಧರ ಎನ್. ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕೊಠಡಿಗಳ ಮೇಲ್ಛಾವಣಿ ಹಾರಿ ಹೋಗಿರುವುದನ್ನು ಮತ್ತು ಕೊಠಡಿಗಳಿಗೆ ಆದ ಹಾನಿ, ಶಾಲೆ ಆವರಣದ ಬದಿಯ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ಮೈದಾನದಲ್ಲಿ ಹರಿಯುತ್ತಿರುವುದನ್ನು ಶಾಸಕರು ಪರಿಶೀಲಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ ಅಜ್ಜಪ್ಪನವರ, ಮಳೆ ಬಂದರೆ ಕೊಠಡಿ ಸೋರುತ್ತದೆ. ಮುಂದಿನ ತಿಂಗಳು ಶಾಲೆ ಆರಂಭವಾಗುವುದರಿಂದ ಮಳೆಗಾಲದಲ್ಲಿ ಮಕ್ಕಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ದುರಸ್ತಿ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಶಾಸಕರು, ಮಳೆ ಮತ್ತು ಗಾಳಿಗೆ ರಟ್ಟಿಹಳ್ಳಿ ಮತ್ತು ಖಂಡೇಬಾಗೂರು ಗ್ರಾಮದ ಶಾಲೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಕೊಠಡಿಗಳ ದುರಸ್ತಿಗೆ ಹೆಚ್ಚಿನ ಅನುದಾನ ಕೊರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸುವಂತೆ ಬಿಇಒಗೆ ಸೂಚಿಸಿದರು. ಅಲ್ಲದೆ, ಶಾಲೆಯ ಅವರಣದಲ್ಲಿ ಗಟಾರದ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರಗೆ ಸೂಚಿಸಿದರು.</p><p>ಸಿಆರ್​ಪಿ ಜಗದೀಶ ಕಠಾರಿ, ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ ಪೂಜಾರ, ರಮೇಶ ತಳವಾರ, ಸದಸ್ಯ ಮಂಜುನಾಥ ಅಸ್ವಾಲಿ, ಕಿರಣ ವಾಲ್ಮೀಕಿ, ಸುನಿಲ ನಾಯಕ ಇತರರು ಇದ್ದರು.