ಜಿಲ್ಲೆ

ರಾಜಧಾನಿ ಸುತ್ತಮುತ್ತ ಮಳೆ, ಇಳೆಗೆ ಕಳೆ

ಆರ್.ತುಳಸಿಕುಮಾರ್

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬುಧವಾರ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದ್ದು, ಇಳೆಗೆ ಕಳೆ ಮರಳಿದೆ.

ಪೂರ್ವ ಮುಂಗಾರು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ವರ್ಷವೈಭವ ನಿಧಾನವಾಗಿ ಕಾಣಲಾರಂಭಿಸುತ್ತಿದೆ. ಭರಣಿ ಮಳೆ ಧರಣಿಯನ್ನು ತಣಿಸುತ್ತದೆ ಎಂಬ ಹಿರಿಯರ ಮಾತು ಬೇಸಿಗೆಯ ಕಡೆಯ ದಿನಗಳಲ್ಲಿ ನಿಜವಾಗಿದೆ. ಮೇ 11ರಿಂದ ಕೃತ್ತಿಕಾ ಮಳೆ ಆರಂಭವಾಗಲಿದ್ದು, ಭಾರೀ ಮಳೆ ನಿರೀಕ್ಷಿಸಬಹುದಾಗಿದೆ.

ಬಿಬಿಎಂಪಿ ಒಳಗೊಂಡಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಅವಿಭಜಿತ ಕೋಲಾರ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಇದರಿಂದಾಗಿ ಗರಿಷ್ಠ ಉಷ್ಣಾಂಶದಲ್ಲಿ 3-4 ಡಿ. ಸೆ. ಇಳಿಕೆಯಾಗಿದ್ದು, ಬಿಸಿಲಿನಿಂದ ಉಂಟಾಗುತ್ತಿದೆ ಧಗೆ ಕಡಿಮೆಯಾಗಿದೆ.

ತುಮಕೂರು, ಮಂಡ್ಯ, ಹಾಸನ ಹಾಗೂ ಚಿಕ್ಕಮಗಳೂರಿನ ಕೆಲ ತಾಲೂಕುಗಳ ಕೆಲೆವೆಡೆ ಸಾಧಾರಣ ಪ್ರಮಾಣದ ಮಳೆಯಾಗಿದೆ.

ಕೊಡಗಿನಲ್ಲಿ ಮಳೆ:

ಕಾವೇರಿ ಕಣಿವೆ ಭಾಗದ ನದಿ ಪಾತ್ರದಲ್ಲಿ ನೀರಿನ ಹರಿವು ಅತ್ಯಲ್ಪಕ್ಕೆ ಇಳಿದಿದೆ. ಈ ಹೊತ್ತಿನಲ್ಲೇ ಕೊಡಗಿನ ಸೋಮವಾರಪೇಟೆ ತಾಲೂಕಿನ ಹಲವೆಡೆ ವ್ಯಾಪಕ ಮಳೆಯಾಗಿದೆ. ಇಲ್ಲಿನ ಕೇಡಕಲ್ ಗ್ರಾಪಂ ವ್ಯಾಪ್ತಿಯಲ್ಲಿ 40 ಮಿ.ಮೀ. ಮಳೆ ಸುರಿದಿದೆ. ವೀರಾಜಪೇಟೆ ತಾಲೂಕಿನ ಕೆಲವೆಡೆ ಕೂಡ ಮಳೆಯಾಗಿದೆ. ಶುಕ್ರವಾರದಿಂದ ಕೊಡಗು ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ರಾಜಧಾನಿಯಲ್ಲಿ ಗಾಳಿ, ಮಳೆ ಜೋರು:

ಬೆಂಗಳೂರಿನಲ್ಲಿ ಕಳೆದ ವಾರ ಈ ವರ್ಷದ ಮೊದಲ ಮಳೆ ಬಿದ್ದ ಬಳಿಕ ಬುಧವಾರ ನಗರದೆಲ್ಲೆಡೆ ವ್ಯಾಪಕವಾಗಿ ವರ್ಷಧಾರೆಯಾಗಿದೆ. ಬಿಬಿಎಂಪಿಯ ಎಂಟೂ ವಲಯಗಳಲ್ಲೂ ಮಳೆ ಸುರಿದಿದ್ದು, ರಾಜರಾಜೇಶ್ವರಿನಗರ ವಲಯದಲ್ಲಿ ಅತೀ ಹೆಚ್ಚು 52 ಮಿ.ಮೀ. ವರ್ಷಧಾರೆಯಾಗಿದೆ. ಹಲವು ಪ್ರದೇಶಗಳಲ್ಲಿ ಒಂದು ಗಂಟೆ ಕಾಲ ಮಳೆಯಾಗಿದ್ದು, ತಾಪಮಾನದಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಇದರಿಂದಾಗಿ ರಾತ್ರಿ ವೇಳೆ ಕಾಣುತ್ತಿದ್ದ ಧಗೆ ಮಳೆಯಿಂದ ತಣ್ಣನೆಯ ವಾತಾವರಣಕ್ಕೆ ತಿರುಗಿದೆ. ಭಾರೀ ಮಳೆಯಿಂದಾಗಿ ಏಳೆಂಟು ಮರಗಲು ಧರೆಗುರುಳಿದ್ದು, ಸಂಜೆ ವೇಳೆ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.

ರಾಜಧಾನಿಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆ? (ಮಿ.ಮೀ. ಗಳಲ್ಲಿ):

ಆರ್.ಆರ್.ನಗರ - 52

ನಾಯಂಡಹಳ್ಳಿ - 52

ತರಳು - 45

ಮಾರುತಿಮಂದಿರ - 42

ವಿದ್ಯಾಪೀಠ - 38

ಚೋಳನಾಯಕನಹಳ್ಳಿ - 34

ವಿ. ನಾಗೇನಹಳ್ಳಿ - 31

ಬನ್ನೇರುಘಟ್ಟ - 27

ಕೆಂಗೇರಿ - 24