ಜಿಲ್ಲೆ

ಮಳೆನೀರು ಹರಿವ ತೋಡಿಗೆ ಮಣ್ಣು, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳೀಯರ ಆಗ್ರಹ

Udupi

ಪಡುಬಿದ್ರಿ: ಇಲ್ಲಿನ ನಡ್ಸಾಲು ಗ್ರಾಮದ ಅಬ್ಬೇಡಿ ಅಂಗನವಾಡಿ ಕೇಂದ್ರ ಮುಂಭಾಗದ ಖಾಸಗಿ ಜಮೀನಿನ ಮಾಲೀಕರೊಬ್ಬರು ಸರ್ಕಾರಿ ಜಮೀನಿನಲ್ಲಿರುವ ಮಳೆ ನೀರು ಹರಿಯುವ ಕಂದಕವನ್ನೇ ಮಣ್ಣುತುಂಬಿಸಿ ಸಮತಟ್ಟು ಮಾಡಿದ್ದಾರೆ.

ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡಲಾಗುತ್ತಿದೆ. ಖಾಸಗಿ ಜಮೀನಿನ ಮುಂಭಾಗದಲ್ಲಿ ಹಲವಾರು ವರ್ಷಗಳಿಂದ ಇದ್ದ ಮಳೆ ನೀರು ಹರಿಯುವ ಕಂದಕವನ್ನೇ ಸಮತಟ್ಟು ಮಾಡಿ ನೀರು ಹರಿಯದಂತೆ ತಡೆಯೊಡ್ಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಮಳೆ ನೀರು ಹರಿಯುವ ತೋಡು ಇರುವ ಜಮೀನು ಸರ್ಕಾರಕ್ಕೆ ಸೇರಿದ್ದು, ಈ ಬಗ್ಗೆ ಕಂದಾಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವರ್ಷದ ಹಿಂದೆ ಇಲ್ಲಿನ ಇನ್ನೊಂದು ಪಾರ್ಶ್ವದಲ್ಲಿನ ಕಂದಕವನ್ನು ವ್ಯಕ್ತಿಯೊಬ್ಬರು ಜಮೀನು ಮಾರಾಟಕ್ಕಾಗಿ ಸಮತಟ್ಟುಗೊಳಿಸಿದ್ದರು. ಆ ಸಂದರ್ಭ ಗ್ರಾಪಂ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಸಮತಟ್ಟು ಮಾಡಿದ ಕಂದಕದಲ್ಲಿ ಪೈಪು ಅಳವಡಿಸಿ ಮಳೆ ನೀರು ಹರಿಯಲು ವ್ಯವಸ್ಥೆ ಕಲ್ಪಿಸುವುದಾಗಿ ಆ ವ್ಯಕ್ತಿ ತಿಳಿಸಿದ್ದರು. ಆದರೆ ಅದು ಈವರೆಗೆ ಈಡೇರಿಲ್ಲ. ಸದ್ಯ ಮತ್ತೆ ಕಾಮಗಾರಿ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಅದಕ್ಕೆ ಕಡಿವಾಣ ಹಾಕಬೇಕು. ಇಲ್ಲಿನ ಸರ್ಕಾರಿ ಜಮೀನು ಸರ್ವೆ ಮಾಡಿ ನಿವೇಶನ ರಹಿತರಿಗೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕಂದಕ ಒತ್ತುವರಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ನಡ್ಸಾಲು ಗ್ರಾಮದ ಸರ್ವೆ ಸಂಖ್ಯೆ 77ರಲ್ಲಿ ಸುಮಾರು 10 ಸೆಂಟ್ಸ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ನೀರು ಹರಿಯುವ ಕಂದಕವಿದ್ದು, ಹಿಂದೆ ಜಮೀನು ಸಮತಟ್ಟು ಮಾಡಿದವರಿಗೂ ನೀರು ಹರಿಯಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿತ್ತು.

ಶ್ಯಾಮ್‌ಸುಂದರ್, ಗ್ರಾಮಲೆಕ್ಕಿಗ