ಜಿಲ್ಲೆ

ಒಳಚರಂಡಿಗೆ ಮಳೆ ನೀರು ಹರಿದರೂ ಮಂಗಳೂರು ಮಹಾನಗರ ಪಾಲಿಕೆ ಮೌನ

Prashanth S Suvarna

ಮಂಗಳೂರು: ನಗರದಲ್ಲಿ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇದೆ. ಆದರೂ ಮಂಗಳೂರಿನ ನೂರಾರು ಮನೆ/ವಸತಿ ಸಮುಚ್ಚಯದವರು ಶೌಚಾಲಯದ ನೀರು ಹರಿಯುವ ಒಳಚರಂಡಿಗೆ ಮಳೆ ನೀರು ಜೋಡಣೆ ಮಾಡಿದ್ದಾರೆ. ಇದರಿಂದಾಗಿ ನಗರದ ವಿವಿಧೆಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಗಲೀಜು ನೀರು ಹರಿಯತೊಡಗಿದೆ.

ಚರಂಡಿ ವ್ಯವಸ್ಥೆ ಇಲ್ಲದ ಕೆಲವರು ತಮ್ಮ ಹಿತ್ತಲಿನ ಮತ್ತು ಮನೆಯ ಸುತ್ತಮುತ್ತ ಬೀಳುವ ಮಳೆ ನೀರನ್ನು ನಗರದ ಒಳಚರಂಡಿಗೆ ಜೋಡಿಸಿದ್ದಾರೆ. ಹೀಗಾಗಿ ಮಂಗಳೂರಿನ ವಿವಿಧ ಮ್ಯಾನ್‌ಹೋಲ್‌ಗಳು ತೆರೆದು ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಮಂಗಳೂರು ಪಾಲಿಕೆ ಮೌನ ವಹಿಸಿದೆ.

ಉಕ್ಕಿ ಹರಿವ ತ್ಯಾಜ್ಯ:

ಮಳೆ ನೀರನ್ನು ಒಳಚರಂಡಿ ಕೊಳವೆಯಲ್ಲಿ ಹರಿಸಿದ್ದರಿಂದ ನಗರದ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್‌ಗಳಿಂದ ತ್ಯಾಜ್ಯ ನೀರು ಉಕ್ಕಿ ಹರಿದು ರಸ್ತೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೆ, ಒಳಚರಂಡಿ ಸಂಸ್ಕರಣ ಘಟಕಗಳಿಗೂ ವಿನ್ಯಾಸಗೊಳಿಸಿದ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಬಂದು ಸಂಸ್ಕರಣಾ ಘಟಕಗಳಲ್ಲಿ ತೊಂದರೆ ಉಂಟಾಗುತ್ತಿದೆ.

22 ಕಡೆಗಳಲ್ಲಿ ವೆಟ್‌ವೆಲ್:

ಕುದ್ರೋಳಿ, ಪಾಂಡೇಶ್ವರ, ಪಡೀಲ್, ಎಕ್ಕೂರು, ಕೊಟ್ಟಾರಚೌಕಿ ಸೇರಿದಂತೆ ಮಂಗಳೂರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್ ನಿರ್ಮಿಸಲಾಗಿದೆ. ಶೌಚಾಲಯ, ಪಾತ್ರೆ ತೊಳೆದ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್ (ಒಟ್ಟು 25 ಸಾವಿರಕ್ಕೂ ಅಧಿಕ) ದಾಟಿ, ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ.

ಸಂಸ್ಕರಣೆಗೆ ತೊಡಕು

ಲೆಕ್ಕಾಚಾರದಷ್ಟೇ ಒಳಚರಂಡಿ ನೀರು ಎಸ್‌ಟಿಪಿಗೆ ಬರಬೇಕು. ಆದರೆ, ಒಳಚರಂಡಿಗೆ ಮಳೆ ನೀರು ಲಿಂಕ್ ಮಾಡಿದ್ದರಿಂದ ನೀರಿನ ಪ್ರಮಾಣ ದುಪ್ಪಟ್ಟಾಗಿದೆ. ನಿಯಮಿತ ಸಾಮರ್ಥ್ಯಕ್ಕಿಂತ ಅಧಿಕ ನೀರು ಎಸ್‌ಟಿಪಿಗೆ ಬಂದರೆ ಅದು ಸ್ವೀಕರಿಸಲೂ ಆಗುವುದಿಲ್ಲ. ಪೈಪ್‌ಲೈನ್ ಕೂಡ ಅದಕ್ಕೆ ತಕ್ಕ ಪ್ರಮಾಣದಲ್ಲಿಲ್ಲ. ಹೀಗಾಗಿ ಬಂದ ನೀರು ವಾಪಾಸ್ ಆಗುತ್ತದೆ. ಈ ವೇಳೆ ಒತ್ತಡ ತಾಳದೆ ಮಧ್ಯದ ಮ್ಯಾನ್‌ಹೋಲ್‌ಗಳಿಂದ ಒಳಚರಂಡಿ ನೀರು ಹೊರಗೆ ಬರುವಂತಾಗುತ್ತದೆ.

25 ಸಾವಿರಕ್ಕೂ ಅಧಿಕ ಮ್ಯಾನ್‌ಹೋಲ್

ಮಂಗಳೂರು ಪಾಲಿಕೆಯ ಒಳಚರಂಡಿ ಮೂಲ ಯೋಜನೆಯು 1957ರ ನಿರ್ದೇಶನದಂತೆ 1970-71ರಲ್ಲಿ ಕಾಮಗಾರಿ ಪೂರ್ಣಗೊಳಿಸಿತ್ತು. ಅಂದಿನ ಜನಸಂಖ್ಯೆ 1,80,000ಕ್ಕೆ ತಯಾರಿಸಿ ಅಂದಾಜಿತ 2 ಲಕ್ಷ ಜನಸಂಖ್ಯೆಗೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆ ಕಾಲದಲ್ಲಿ 6000 ಮ್ಯಾನ್‌ಹೋಲ್ ಮಾಡಲಾಗಿತ್ತು. ಆ ನಂತರ 2006ರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ಎಡಿಬಿ ಯೋಜನೆಯಡಿ ಒಟ್ಟು 14,365 ಮ್ಯಾನ್‌ಹೋಲ್ ಮಾಡಲಾಗಿದೆ. ಆ ಬಳಿಕ ಅಗತ್ಯವಿರುವ ಕಾರಣದಿಂದ ಹೆಚ್ಚುವರಿಯಾಗಿ ಮತ್ತೆ 4000ದಷ್ಟು ಮ್ಯಾನ್‌ಹೋಲ್ ನಿರ್ಮಿಸಿದೆ. ಬಳಿಕ ಎಡಿಬಿ 2ನೇ ಯೋಜನೆಯಲ್ಲಿಯೂ ಸಾವಿರಾರು ಮ್ಯಾನ್‌ಹೋಲ್ ನಿರ್ಮಿಸಲಾಗಿದ್ದು, 25 ಸಾವಿರಕ್ಕೂ ಅಧಿಕ ಮ್ಯಾನ್‌ಹೋಲ್‌ಗಳಿವೆ.

ಮನೆಯ ಬಳಿಯಲ್ಲಿ ನೀರು ನಿಲ್ಲಬಾರದೆಂದು ಕೆಲವು ಮನೆ, ್ಲ್ಯಾಟ್‌ನವರು ಅವರಿಗೆ ಸಂಪರ್ಕ ನೀಡಿದ ಒಳಚರಂಡಿ ಲೈನ್‌ಗೆ ಮಳೆ ನೀರು ಲಿಂಕ್ ಮಾಡಿದ್ದಾರೆ. ಮಂಗಳೂರಿನಲ್ಲಿ ಇಂತಹ ಹಲವು ಪ್ರಕರಣಗಳಿರುವ ಬಗ್ಗೆ ಮಾಹಿತಿ ಇದೆ. ಸಂಬಂಧಪಟ್ಟವರು ಇಂತಹ ಜೋಡಣೆಯನ್ನು ತಾವಾಗಿಯೇ ತತ್‌ಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆ ಕ್ರಮ ಕೈಗೊಳ್ಳಲಿದೆ.- ಜಯಾನಂದ ಅಂಚನ್ ಮನಪಾ ಮೇಯರ್