ಶುಕ್ರವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಎಂ.ಎನ್.ಪಿ.ಎಂ. ಕಾಲನಿಯ ಮನೆಗಳಿಗೆ ಮಳೆ ನೀರು ನುಗ್ಗಿರುವುದು. 
ಜಿಲ್ಲೆ

ಮನೆಗಳಿಗೆ ನುಗ್ಗಿದ ಮಳೆ ನೀರು

ಕೆ.ಆರ್.ಸಾಗರ: ಶುಕ್ರವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಇಲ್ಲಿನ ಎಂ.ಎನ್.ಪಿ.ಎಂ ಕಾಲನಿಯ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಜುವಾರಿ ಅಡ್ವಾಂಟೇಜ್ ಕಂಪನಿಯ ಅವೈಜ್ಣಾನಿಕ ಕಾಮಗಾರಿಯೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಇನ್ನು ಮಳೆ ನೀರನ್ನು ಮನೆಯಿಂದ ಹೊರಹಾಕಲು ರಾತ್ರಿಯಿಡೀ ಮನೆಯವರು ಪರದಾಡಿದರಲ್ಲದೆ, ಜುವಾರಿ ಕಂಪನಿ ವಿರುದ್ಧ ಹಿಡಿಶಾಪ ಹಾಕಿದರು.

ಜುವಾರಿ ಕಂಪನಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕಾಗಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಎಂ.ಎನ್.ಪಿ.ಎಂ. ಕಾಲನಿ ಮನೆಗಳ ನೀರು ಹೊರ ಹೋಗಲು ಸಾಧ್ಯವಾಗಿರಲಿಲ್ಲ. ಪರಿಣಾಮ ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಹಲವು ಮನೆಗಳಲ್ಲಿ ಪಾತ್ರೆಗಳು ತೇಲಾಡುತ್ತಿದ್ದ ದೃಶ್ಯ ಕಂಡು ಬಂತು. ಇನ್ನೂ ಕೆಲವೆಡೆ ಜುವಾರಿ ಕಾಂಪೌಂಡ ಕುಸಿದು ಮನೆಗಳಿಗೆ ಹಾನಿಯಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಿವಾಸಿಗಳ ದೂರು ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಗ್ರಾಪಂ ಸದಸ್ಯ ರಾಮು, ಪಿ.ಡಿ.ಒ. ನಟೇಶ್, ರಾಜಸ್ವ ನೀರಿಕ್ಷ ಬಸವರಾಜು, ಕಾರ್ಯದರ್ಶಿ ಶಿವಣ್ಣ ಜುವಾರಿ ಕಂಪನಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಜೆ.ಸಿ.ಬಿ ತರಿಸಿಕೊಂಡು ಮಳೆ ನೀರು ನಿಲ್ಲದಂತೆ ತಾತ್ಕಾಲಿಕವಾಗಿ ಕೆಲಸ ಮಾಡಿಸಿದರು.