ಜಿಲ್ಲೆ

ಜಿಲ್ಲಾಡಳಿತಕ್ಕೆ 'ವರುಣ' ಎಚ್ಚರಿಕೆ...!

ಪ್ರಶಾಂತ ಜಿ. ಭಾಗ್ವತ

ಮುಂಗಾರು ಪೂರ್ವದಲ್ಲೇ ಅಬ್ಬರಿಸಿದ ಮಳೆ

ಎಚ್ಚೆತ್ತುಕೊಳ್ಳಲು ಸೂಚಿಸಿದ ಚರಂಡಿ ಅವ್ಯವಸ್ಥೆ

ಪ್ರಶಾಂತ ಭಾಗ್ವತ ಉಡುಪಿ

ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವದಲ್ಲೇ ಅಬ್ಬರದ ಮಳೆಯಾಗುತ್ತಿದೆ. ಇದು ಈ ಬಾರಿಯ ಮಳೆಗಾಲವು ಭೀಕರ ಸ್ವರೂಪ ತಾಳುವ ಮುನ್ಸೂಚನೆಯೂ ಆಗಿದೆ.

ಭಾರತೀಯ ಹವಾಮಾನ ಇಲಾಖೆಯೂ ಸಹ ಈ ವರ್ಷ ವಾಡಿಕೆ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಈ ಹಿಂದೆಯೇ ಮಾಹಿತಿ ನೀಡಿದೆ. ಅದರಂತೆ ಮುಂಗಾರು ಪೂರ್ವದಲ್ಲೇ ಅಬ್ಬರಿಸುತ್ತಿರುವ ವರುಣ, ಜಿಲ್ಲಾಡಳಿತಕ್ಕೂ ತನ್ನ ಸ್ಯಾಂಪಲ್​ ಝಲಕ್​ ಮೂಲಕ ಮೊನ್ನೆ ಸೋಮವಾರ ಎಚ್ಚರಿಕೆ ನೀಡಿದ್ದಾನೆ.

ಕಳೆದ ವರ್ಷ ಕೃತಕ ನೆರೆ

ಕಳೆದ ವರ್ಷ ವಾಡಿಕೆಗಿಂತ ಶೆ.16ರಷ್ಟು ಹೆಚ್ಚು ಮಳೆ ಸುರಿದು ಉಡುಪಿ ಜಿಲ್ಲೆಯಲ್ಲಿ ಅನೇಕ ಕಡಗಳಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ರಾಜಾಂಗಣ, ಅತ್ರಾಡಿ ಮದಗ, ಗುಂಡಿಬೈಲು, ಬನ್ನಂಜೆ ಗರೋಡಿ ಸೇರಿದಂತೆ ವಿವಿಧ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಸಂಭವಿಸಿತ್ತು. ಮನೆ-ಅಂಗಡಿಗಳ ಒಳಗೆ ನೀರು ನಿಂತಿತ್ತು. ಅಪಾರ ಪ್ರಮಾಣದಲ್ಲಿ ಭತ್ತ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶಗೊಂಡಿದ್ದವು. ಕಾಪು, ಮರವಂತೆ ಇನ್ನಿತರ ಕಡೆ ಕಡಲ್ಕೊರೆತವೂ ಆಗಿತ್ತು.

ಒಂದೇ ಮಳೆಗೆ ಕಾಡಿತು ಚರಂಡಿ

ಕಳೆದ ವರ್ಷದ ಕಹಿ ಅನುಭವದಿಂದಾಗಿ ಈ ವರ್ಷ ಮಳೆಗಾಲದಲ್ಲಿ ತೊಂದರೆ ಆಗದಂತೆ ಜಿಲ್ಲಾಡಳಿತ 2 ತಿಂಗಳ ಹಿಂದೆಯೇ ನಗರಸಭೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಎಲ್ಲೆಡೆಯ ಚರಂಡಿ, ಒಳಚರಂಡಿ ಸ್ವಚ್ಛಪಡಿಸಿ ಮಳೆನೀರು ಹಾಗೂ ಕೊಳಚೆ ನೀರು ಸರಿಯಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು. ನಿಧಾನಗತಿಯಲ್ಲಿ ಕೆಲಸ ಸಾಗಿತ್ತು. ಆದರೆ, ಮೇ 20ರ ಒಂದೇ ಮಳೆಗೆ ಉಡುಪಿ ವ್ಯಾಪ್ತಿಯಲ್ಲಿ 42 ಕಡೆಗಳಲ್ಲಿ ಚರಂಡಿ ಬ್ಲಾಕ್​ ಆಗಿ ಸಮಸ್ಯೆ ತಲೆದೋರಿತ್ತು.

ಅಬ್ಬರಿಸಿದ ಮಳೆ

ಮೇ 20ರಿಂದ 24ರ ವರೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಮೇ 20ರಂದು ಬೆಳಗ್ಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆ ವರೆಗೆ 125 ಮಿ.ಮೀ. ಮಳೆಯಾಗಿತ್ತು. ಶಾಲೆಗಳಿಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಳೆಯಿಂದ ಪಾರಾಗಿದ್ದರು. ಮೇ 21ರಂದು ಮಳೆ ವಿರಾಮ ಪಡೆದಿತ್ತು.

ಮೆಸ್ಕಾಂಗೆ 31 ಲಕ್ಷ ರೂ. ಹಾನಿ

ಮೇ 20, 21ರಂದು ಎರಡು ದಿನ ಸುರಿದ ಮಳೆಗೆ ವಿದ್ಯುತ್​ ಇಲಾಖೆಗೆ ಭಾರಿ ನಷ್ಟವಾಗಿದೆ. ಗಾಳಿ-ಮಳೆಗೆ ಮರಗಳು ಉರುಳಿ 173 ವಿದ್ಯುತ್​ ಕಂಬ ಮುರಿದಿದೆ. 1,5 ಕಿ.ಮೀ. ತಂತಿ ಹಾಗೂ 2 ಟ್ರಾನ್ಸ್ ಫಾರ್ಮರ್ ಹಾನಿಗೊಂಡಿದ್ದು ಅಂದಾಜು 31 ಲಕ್ಷ ರೂ. ನಷ್ಟ ಸಂಭವಿಸಿದೆ. ಉಡುಪಿ ನಗರ ಸುತ್ತಮುತ್ತ, ಕಾಪು, ಬ್ರಹ್ಮಾವರ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಉಡುಪಿ ಜಿಲ್ಲಾ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್​ ದಿನೇಶ ಉಪಾಧ್ಯ ಮಾಹಿತಿ ನೀಡಿದ್ದಾರೆ.

ಕಡ್ಡಾಯವಾಗಿ ಮುನ್ಸೂಚನೆ ಪಾಲಿಸಿ

ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಾರಂಭದ ಹಂತದಲ್ಲಿದ್ದು, ಭಾರಿ ಗುಡುಗು-ಸಿಡಿಲಿನಿಂದ ಕೂಡಿದ ಗಾಳಿ-ಮಳೆಯಾಗುತ್ತಿದೆ. ಇದು ಸಾರ್ವಜನಿಕರು ಮತ್ತು ಜಾನುವಾರು ಪ್ರಾಣಹಾನಿಗೆ ಕಾರಣವಾಗಬಹುದು. ಕಳೆದ ವರ್ಷ ಗುಡುಗು-ಸಿಡಿಲಿಗೆ ಜಾನುವಾರು ಹಾಗೂ ಮಾನವ ಜೀವ ಹಾನಿಯಾಗಿದ್ದು, ಈ ಬಾರಿ ಅದನ್ನು ತಡೆಗಟ್ಟಬೇಕಿದೆ. ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಜಿಲ್ಲಾ ಪ್ರಾಧಿಕಾರದಿಂದ ಹೊರಡಿಸುವ ಮುನ್ಸೂಚನೆ ಕಡ್ಡಾಯವಾಗಿ ಪಾಲಿಸಬೇಕು. ಮಳೆ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದು, ಯಾವುದೇ ಅನಾಹುತಕ್ಕೆ ಒಳಗಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಉಡುಪಿ ಜಿಲ್ಲಾಡಳಿತ ಸೂಚಿಸಿದೆ.
ಉಡುಪಿಯಲ್ಲಿ ಕಳೆದ ವರ್ಷ ಸಮಸ್ಯೆ ಉಂಟಾಗಿದ್ದ ಕಡೆ ಈ ಬಾರಿ ಸಮಸ್ಯೆ ಆಗಿಲ್ಲ. ಮಣಿಪಾಲ ಸಿಂಡಿಕೇಟ್​ ಸರ್ಕಲ್​ನ ಕೆಳಭಾಗದಿಂದ ಲಕ್ಷ್ಮೀಂದ್ರ ನಗರದ ಕಡೆ ಮಾತ್ರ ಸಮಸ್ಯೆ ಆಗಿದೆ. ಅಲ್ಲಿನ ತೋಡು ಬ್ಲಾಕ್​ ಆಗಿದ್ದರಿಂದ ನೀರು ರಸ್ತೆ ಮೇಲೆ ಹರಿದು ತೊಂದರೆಯಾಗಿದೆ. ಅದನ್ನೀಗ ಸರಿಪಡಿಸಲಾಗಿದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ