ಉಡುಪಿ: ಹದಿಮೂರು ಗ್ರಾಮಗಳು ಜಲಾವೃತವಾಗಿದ್ದ ಜಿಲ್ಲೆಯಲ್ಲಿ, ಸೋಮವಾರ ವರುಣನ ಅಬ್ಬರ ಕೊಂಚ ಕಡಿಮೆಯಾಗಿ, ತಗ್ಗುಪ್ರದೇಶ ಹೊರತುಪಡಿಸಿ ಇತರ ಭಾಗಗಳಲ್ಲಿ ನೆರೆ ನೀರು ಇಳಿದಿದೆ. 24 ಗಂಟೆ ಕಾಲ ಸುರಿದ ಮಳೆಗೆ ಸುಮಾರು ಕೋಟ್ಯಂತರ ರೂ. ನಷ್ಟ ಅಂದಾಜಿಸಲಾಗಿದೆ. ಎಲ್ಲೆಡೆ ಪರಿಹಾರ ಕಾರ್ಯ ಭರದಿಂದ ಸಾಗಿದೆ.
ಸೋಮವಾರ ಮಳೆ ಅರ್ಭಟ ಕಡಿಮೆಯಾಗಿದ್ದರೂ ಮುಂದಿನ ಎರಡು ದಿನ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಆದೇಶಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳ ಜನರು ಯಥಾಸ್ಥಿತಿಗೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಭಾನುವಾರ ತಡರಾತ್ರಿಯಿಂದ ಮಳೆ ಪ್ರಮಾಣ ಕುಂಠಿತವಾಗಿದೆ. ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಬಿಸಿಲ ವಾತಾವರಣವಿದ್ದರೂ, ಮಧ್ಯಾಹ್ನ ಬಳಿಕ ಮತ್ತೆ ಮಳೆ ಚುರುಕಾಗಿತ್ತು.
ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ 67 ಮನೆಗಳು ಧರಾಶಾಯಿಯಾಗಿವೆ. ಉಡುಪಿ 36, ಕುಂದಾಪುರ 6, ಬ್ರಹ್ಮಾವರ 8, ಕಾಪು 14, ಕಾರ್ಕಳದಲ್ಲಿ ಮೂರು ಮನೆಗಳಿಗೆ ಗಂಭೀರ ಹಾನಿ ಸಂಭವಿಸಿದೆ. ಕಾಪು ತಾಲೂಕಿನ 30 ಗ್ರಾಮದಲ್ಲಿ ಇನ್ನೂ ನೆರೆ ನೀರು ಕಡಿಮೆಯಾಗದೆ ಸಾರ್ವಜನಿಕರಲ್ಲಿ ಆತಂಕ ಮುಂದುವರಿದಿದೆ. ಉಡುಪಿಯಲ್ಲಿ 2, ಬ್ರಹ್ಮಾವರ 3, ಕಾಪು 2 ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ.
ಮನೆ ಮತ್ತು ಆಶ್ರಯ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರದಲ್ಲಿ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಉಡುಪಿಯಲ್ಲಿ 65, ಬ್ರಹ್ಮಾವರ 26, ಕಾಪುವಿನಲ್ಲಿ 46 ಮಂದಿ ಸೇರಿದಂತೆ 137 ಜನರು ಪುನರ್ವಸತಿ ಕೇಂದ್ರದಲ್ಲಿದ್ದಾರೆ. ಉಳಿದಂತೆ ಶನಿವಾರ ತೆರೆದಿದ್ದ 24 ಪುನರ್ವಸತಿ ಕೇಂದ್ರಗಳಲ್ಲಿ ನೆಲೆಸಿದ್ದ 1,064 ಮಂದಿ ತಮ್ಮ ಮನೆಗಳಿಗೆ ವಾಪಸಾಗಿದ್ದಾರೆ.
ಕಡಿಮೆಯಾಗದ ಆತಂಕ: ಉಡುಪಿ ನಗರದಲ್ಲಿ ಮನೆ, ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಚ್ಛತಾ ಕಾರ್ಯ, ವಸ್ತುಗಳ ಜೋಡಣೆಯಲ್ಲಿ ತಲ್ಲೀನರಾಗಿದ್ದಾರೆ. ನೆರೆ ತಗ್ಗಿದ್ದರೂ ಆತಂಕ ಜನರಲ್ಲಿ ಮುಂದುವರಿದಿದೆ. ಸೋಮವಾರ ಮಳೆ ಕಡಿಮೆಯಾಗಿದ್ದರೂ ನಗರದ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿರಲಿಲ್ಲ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದರು. ಜನರಲ್ಲಿ ಧೈರ್ಯ ತುಂಬುವ ಕಾರ್ಯ ನಡೆಸಿದರು. ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ , ಭೂ ಕುಸಿತ ತೆರವು ಕಾರ್ಯ ಭರದಿಂದ ನಡೆಯುತ್ತಿದೆ. ಕೃಷ್ಣ ಮಠದಿಂದ ಸಂತ್ರಸ್ತರ ಮನೆಗೆ ಉಪಾಹಾರ, ಊಟ ಪೂರೈಕೆ ಮಾಡಲಾಗಿತ್ತು. ಭಾನುವಾರ ಗರಿಷ್ಠ 11 ಮೀಟರ್ ಮಟ್ಟದಲ್ಲಿ ಹರಿಯುತ್ತಿದ್ದ ಸ್ವರ್ಣಾ ನದಿ ನೀರಿನ ಮಟ್ಟ 3 ಮೀಟರ್‌ಗಳಷ್ಟು ಇಳಿದಿದೆ. ಶೀರೂರು ಸಮೀಪದ ಮಾಣೆ ಸೇತುವೆ ಮೇಲೆ ಭಾನುವಾರ ತಡರಾತ್ರಿಯವರೆಗೂ ನೀರು ಹರಿದಿದೆ. ನೀರಲ್ಲಿ ತೇಲಿ ಬಂದ ಮರಮಟ್ಟು ಅಪ್ಪಳಿಸಿ 30 ವರ್ಷ ಹಳೆಯ ಸೇತುವೆಯ ರಕ್ಷಣಾ ತಡೆಗೋಡೆ ತುಂಡಾಗಿದೆ.
ಭೀತಿಯಲ್ಲಿ ಉದ್ಯಾವರ, ಕಡೆಕಾರು ಜನತೆ :ಉದ್ಯಾವರ, ಕಡೆಕಾರು ಸೇರಿದಂತೆ ಪಾಂಗಾಳ ನದಿ ಪಾತ್ರದ ಸುತ್ತಮುತ್ತಲಿನ ಪರಿಸರದ ನಿವಾಸಿಗಳ ಮನೆಗಳಲ್ಲಿ ಇನ್ನೂ ನೀರು ತುಂಬಿಕೊಂಡಿದ್ದು, ನೆರೆ ತಗ್ಗಿಲ್ಲ. ಈ ಭಾಗದ ಜನತೆ ಇನ್ನೂ ಭಯದಿಂದಲೇ ಇದ್ದಾರೆ. ಉದ್ಯಾವರ ನದಿಪಾತ್ರದಲ್ಲಿರುವ 20ಕ್ಕೂ ಅಧಿಕ ಮನೆಗಳಿಗೆ ಭಾನುವಾರ ನೆರೆ ನೀರು ನುಗ್ಗಿತ್ತು. ಉದ್ಯಾವರ, ಕಡೆಕಾರು, ಅಂಬಲಪಾಡಿ ಭಾಗದಲ್ಲಿ ಪ್ರವಾಹಕ್ಕೆ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮನೆ, ಸೂರು ಕಳೆದುಕೊಂಡ ಹಲವರು ದಿಕ್ಕು ತೋಚದಂತಾಗಿದ್ದಾರೆ. ಶನಿವಾರ ತಡರಾತ್ರಿ ರಕ್ಷಣೆಗೆ ಸೂಕ್ತ ರೀತಿ ಸ್ಪಂದಿಸದ ಕಾರಣಕ್ಕೆ ಬನ್ನಂಜೆ ಗರಡಿ ರಸ್ತೆ, ಮೂಡನಿಡಂಬೂರು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದ.ಕ.ದಲ್ಲಿ ಉತ್ತಮ ಮಳೆ ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೋಮವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಘಟ್ಟದ ತಪ್ಪಲು ಭಾಗ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿದೆ. ನದಿ ನೀರಿನ ಮಟ್ಟ ಇಳಿದಿದೆ. ಈ ನಡುವೆ ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಇರುವುದರಿಂದ ಮೀನುಗಾರಿಕೆಗೆ ತೆರಳಬಾರದು ಎಂದು ಎಂದು ಎಚ್ಚರಿಸಲಾಗಿದೆ. ಮಂಗಳವಾರ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಪ್ರಮಾಣ ಸ್ವಲ್ಪ ತಗ್ಗುವ ಸಾಧ್ಯತೆಯಿದೆ. ಭಾನುವಾರದ ಮಳೆಯಿಂದ 32 ಮನೆಗಳಿಗೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಇಳಿಮುಖವಾಗಿ, ಜನಜೀವನ ಸಹಜತೆಯತ್ತ ಮರಳುತ್ತಿದೆ. ರೆಡ್ ಅಲರ್ಟ್ ಸೂಚನೆ ಇರುವುದರಿಂದ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ವಹಿಸಿದೆ. ತಗ್ಗು ಪ್ರದೇಶದ ನಿವಾಸಿಗಳಿಗೆ, ನದಿ ಪಾತ್ರದ ಜನತೆಗೆ ಕಟ್ಟೆಚ್ಚರ ನೀಡಲಾಗಿದೆ. ಎನ್‌ಡಿಆರ್‌ಎಫ್ ಟೀಂ ಬನ್ನಂಜೆಯಲ್ಲಿ ಸನ್ನದ್ಧವಾಗಿದೆ. ನೌಕಾಸೇನೆ, ಮತ್ತು ಕೋಸ್ಟ್‌ಗಾರ್ಡ್ ತಂಡಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ನಷ್ಟದ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡು ದಿನಗಳಲ್ಲಿ ವರದಿ ಜಿಲ್ಲಾಡಳಿತ ಕೈಸೇರಲಿದೆ. - ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ