ಬೆಂಗಳೂರು: ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ವಾಯಭಾರ ಕುಸಿತ ಪರಿಣಾಮದಿಂದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದಾದ್ಯಂತ ಗುಡುಗು ಸಹಿತ ಹಿಂಗಾರು ಆರ್ಭಟ ಭಾನುವಾರವೂ ಮುಂದುವರಿದಿದೆ. ಅಲ್ಲದೆ, ವಾರಪೂರ್ತಿ ರಾಜ್ಯದಲ್ಲಿ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ದೀಪಾವಳಿ ಹಬ್ಬಕ್ಕೆ ಮಳೆ ಭೀತಿ ಎದುರಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಅ.20ರಿಂದ ಅ.24ರವರೆಗೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ 2 ದಿನ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರ ಪ್ರದೇಶಗಳಿಗೆ ತೆರಳದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಅಲ್ಲದೆ, ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಅ.25ರಿಂದ ಮುಂದಿನ 2 ದಿನ ವ್ಯಾಪಕ ಮಳೆಯಾಗಲಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಚಾಮರಾಜನಗರ ಮತ್ತು ಶಿವಮೊಗ್ಗದಲ್ಲಿ ಅ.23ರಿಂದ ಅ.26ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಗದಗ, ಹಾವೇರಿಯಲ್ಲಿ ಅ.24 ಮತ್ತು ತುಮಕೂರಿನಲ್ಲಿ ಅ.25ರಂದು ಬಿರುಸಾಗಿ ಮಳೆಯಾಗುವುದರಿಂದ ಇಲಾಖೆ, ಯೆಲ್ಲೋ ಅಲರ್ಟ್ ಘೋಷಿಸಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಒಣಹವೆ ಮುಂದುವರಿದಿದೆ.
ರಾಜ್ಯದ ಹಲವೆಡೆ ಈಶಾನ್ಯ ಮಾನ್ಸೂನ್ ಇನ್ನಷ್ಟು ಚುರುಕುರಾಗಿದೆ. ಇದರ ಪ್ರಭಾವದಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶ ಹೊರತುಪಡಿಸಿ ಇತರ ಭಾಗಗಳಲ್ಲಿ ಅ.20ರಿಂದ ಅ.26ರವರೆಗೆ ಜೋರು ಮಳೆಯಾಗಲಿದೆ. ದೀಪಾವಳಿ ಹಬ್ಬಕ್ಕೆ ಮಳೆ ತೀವ್ರತೆ ತುಸು ಹೆಚ್ಚಿರಲಿದೆ. ಹಗಲಿನ ವೇಳೆ ಬಿಸಿಲಿನ ವಾತಾವರಣವಿದ್ದರೂ ಆಗಾಗ್ಗೆ ವರ್ಷಧಾರೆಯಾಗಲಿದೆ.
| ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.