ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಕೂಡ ಬಿದ್ದಿವೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಳ್ಳೂರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಗುಂಡಪ್ಪ ಸಕ್ರಪ್ಪ ಚಬನೂರ (55) ಮೃತಪಟ್ಟಿದ್ದಾರೆ. ಇವರು ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಸಿಡಿಲು ಬಡಿದು ಅವಘಡ ಸಂಭವಿಸಿದೆ. ಇನ್ನು ಮುದ್ದೇಬಿಹಾಳ, ಬಬಲೇಶ್ವರ, ತಿಕೋಟಾ, ವಿಜಯಪುರ ತಾಲೂಕಿನ ಹಲವೆಡೆ ಭಾರಿ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರಲ್ಲಿ ಮಿಂಚು, ಗುಡುಗು ಸಮೇತ ಮಳೆಯಾಯಿತು. ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು. ಮಳೆಯ ಜತೆ ದೊಡ್ಡ ಗಾತ್ರದ ಆಲಿಕಲ್ಲುಗಳೂ ಬಿದ್ದವು. ಸುಂಟಿಕೊಪ್ಪ, ನಾಪೋಕ್ಲು, ಹರದೂರು ವ್ಯಾಪ್ತಿಯಲ್ಲೂ ಮಧ್ಯಾಹ್ನದ ನಂತರ ಉತ್ತಮ ಮಳೆ ಸುರಿಯಿತು. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಕೆಲ ಭಾಗದಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿದು ಇಳೆಗೆ ತಂಪೆರೆಯಿತು. ಬಿರುಗಾಳಿಯೊಂದಿಗೆ ಪ್ರಾರಂಭವಾದ ಮಳೆ ಅರ್ಧ ಗಂಟೆ ಸುರಿದು ಆಲಿಕಲ್ಲು ಮನೆಯಂಗಳ ತುಂಬಿದವು. ತಾಲೂಕಿನ ಮದಘಟ್ಟ, ಪಡುವಳಲು, ತಾರಿಮರ ಕಾಮೇನಹಳ್ಳಿ ಭಾಗದಲ್ಲಿ ಮಳೆ ಜೋರಾಗಿತ್ತು. ಚನ್ನರಾಯಪಟ್ಟಣ ತಾಲೂಕು, ತುಮಕೂರಿನ ಕೆಲವೆಡೆ ಸೋನೆ ಸುರಿಯಿತು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಲವು ಪ್ರದೇಶಗಳಲ್ಲಿ, ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಜೆ ಭಾರಿ ಮಳೆ ಸುರಿಯಿತು. ಹೆಬ್ಬಳ್ಳಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಬಿತ್ತು. ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೆ ವೇಳೆ ಗಾಳಿ ಸಹಿತ ಜೋರು ಮಳೆಯಾಯಿತು. ಜಗಳೂರು ತಾಲೂಕಿನಲ್ಲಿ ಗಾಳಿ ಮಳೆಗೆ ಮನೆಯೊಂದರ ಶೀಟ್ ಹಾರಿಹೋಗಿದೆ. ತಿಮ್ಮಲಾಪುರ ಬಳಿ ಮರವೊಂದು ಧರೆಗುರುಳಿದೆ. ಹರಿಹರ, ಚನ್ನಗಿರಿ ತಾಲೂಕಿನಲ್ಲೂ ಮಳೆ ಸುರಿದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿ ಆಲಿಕಲ್ಲು ಸಮೇತ ವರುಣ ಆರ್ಭಟಿಸಿದ. ಬಾದಾಮಿ, ಗುಳೇದಗುಡ್ಡ ಸೇರಿ ವಿವಿಧ ಭಾಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು.
ಮೆಗ್ಗಾನ್ನ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್
ಶಿವಮೊಗ್ಗ ನಗರದಲ್ಲಿ 1 ತಾಸು ಮಳೆ ಅಬ್ಬರಿಸಿ ವಾತಾವರಣ ತಂಪಾಗಿಸಿತು. ಗುಡುಗು ಸಿಡಿಲು ಜೋರಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕಳಸ, ಬಣಕಲ್ ಭಾಗದಲ್ಲಿ ಸಾಧಾರಣ ಮಳೆ ಬಂದಿದೆ. ಭಾರಿ ಸಿಡಿಲು ಸಹಿತ ಮಳೆಗೆ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಭಾನುವಾರ ಸಂಜೆ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಮೆಗ್ಗಾನ್ ಮಕ್ಕಳ ಆಸ್ಪತ್ರೆಯಲ್ಲಿ 30ಕ್ಕೂ ಅಧಿಕ ಮಕ್ಕಳಿದ್ದು, ನವಜಾತ ಶಿಶುಗಳೂ ಸೇರಿ 25 ಮಕ್ಕಳನ್ನು ಸರ್ಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಲ್ಲ ಮಕ್ಕಳೂ ಆರೋಗ್ಯವಾಗಿದ್ದಾರೆ. ಗುಡುಗು, ಸಿಡಿಲು ಸಹಿತ ಮಳೆಯಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದು, ತಕ್ಷಣವೇ ಆಸ್ಪತ್ರೆ ಎದುರಿಗೆ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.
10ವರೆಗೆ ಹಲವೆಡೆ ಮಳೆ
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ತಾಪಮಾನ ಏರಿಕೆಯಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಏ.10ರವರೆಗೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಹಾಗೂ ಕರಾವಳಿಯಲ್ಲಿ ಗುಡುಗು ಸಹಿತ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಉಷ್ಣಾಂಶ ಏರಿಳಿತ: ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ಬಿಸಿಲಿನ ತಾಪಮಾನ ಏರಳಿ ತವಾಗುತ್ತಿದೆ. ಬೆಂಗಳೂರು, ಕಲಬುರಗಿ, ರಾಯಚೂರು, ವಿಜಯಪುರ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ ಸರಾಸರಿ 36 ಡಿ.ಸೆ.ನಿಂದ 40 ಡಿ.ಸೆ.ವರೆಗೆ ದಾಖಲಾಗುತ್ತಿದೆ. ಮಡಿಕೇರಿ ಹಾಗೂ ಆಗುಂಬೆ ಯಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಏರಿಳಿತವಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.