ಜಿಲ್ಲೆ

ಹೊನ್ನಾಳಿಯಲ್ಲಿ 30 ಮನೆಗಳಿಗೆ ಹಾನಿ

Davangere - Desk - Basavaraja P

ಹೊನ್ನಾಳಿ: ಸತತ ಮಳೆಯಿಂದ ತಾಲೂಕಿನಾದ್ಯಂತ ಕೆರೆ- ಕಟ್ಟೆಗಳು ತುಂಬಿದ್ದು, 30 ಮನೆಗಳು ಹಾನಿಗೊಂಡಿವೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಪ್ರಥಮದರ್ಜೆ ಹಾಗೂ ಪಿಯು ಕಾಲೇಜು, ಬಿಇಒ ಕಚೇರಿ ಆವರಣ ಮತ್ತು ಟಿ.ಬಿ.ವೃತ್ತದ ಶತಮಾನ ಪೂರೈಸಿದ ಸರ್ಕಾರಿ ಟಿ.ಬಿ. ಶಾಲೆಯ ಆವರಣ ಜಲಾವೃತಗೊಂಡಿವೆ. ತಾಲೂಕಿನಲ್ಲಿ ಅಡಕೆ, ಬಾಳೆ, ಮೆಕ್ಕೆಜೋಳ ಮತ್ತಿತರ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಹೊನ್ನಾಳಿ ಪಟ್ಟಣದ ಟಿ.ಬಿ. ಸರ್ಕಾರಿ ಶಾಲೆಯ ಒಂದು ಕೊಠಡಿ ಕುಸಿದು ಬಿದ್ದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. ತಾಲೂಕಿನಾದ್ಯಂತ 3 ಪೂರ್ಣ ಮನೆ, 24 ಭಾಗಶಃ ಮನೆ ಹಾಗೂ 3 ದನದ ಕೊಟ್ಟಿಗೆ ಸೇರಿ 30 ಮನೆಗಳಿಗೆ ಹಾನಿಯಾಗಿದೆ. ಲಿಂಗಾಪುರ ಹಾಗೂ ಹೊಸಹಳ್ಳಿ ಗ್ರಾಮದಲ್ಲಿ ತಲಾ ಒಂದು ಹಸು ಕೊಟ್ಟಿಗೆಯ ಗೋಡೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಸಾಸ್ವೇಹಳ್ಳಿ, ಕುಂದೂರು, ಗೋವಿನಕೋವಿ ಹಾಗೂ ಚೀಲೂರು ಹೋಬಳಿಗಳಲ್ಲಿ ಯಾವುದೇ ಬೆಳೆ ಹಾನಿಯಾಗಿಲ್ಲ. ಆದರೆ, ಮೆಕ್ಕೆಜೋಳದ ಕಾಳು ಗಟ್ಟಿಯಾಗಿರುವ ಕಾರಣ ಕಟಾವು ತಡವಾದರೆ ನಷ್ಟವಾಗುವ ಸಾಧ್ಯತೆ ಹೆಚ್ಚು ಇದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ತಿಳಿಸಿದರು.

ಶಾಲೆಗಳಿಗೆ ರಜೆ: ಮಳೆಯಿಂದ ಯಾವುದೇ ಅವಘಡ ಸಂಭವಿಸಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಗಂಗಾಧರಮೂರ್ತಿ ಹೊನ್ನಾಳಿ- ನ್ಯಾಮತಿ ತಾಲೂಕಿನ ಎಲ್ಲ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿದ್ದಾರೆ.

ಅಲರ್ಟ್ ಆದ ಶಾಸಕ: ಭಾನುವಾರ ಇಡೀ ದಿನ ಸುರಿದ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ಸ್ವೀಕರಿಸಿದ ಶಾಸಕ ಡಿ.ಜಿ. ಶಾಂತನಗೌಡ, ಕೂಡಲೇ ತಾಲೂಕು ಮಟ್ಟದ ಕೆಲವು ಅಧಿಕಾರಿಗಳು, ಪಿಡಿಒ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಕರೆ ಮಾಡಿ, ಪರಿಹಾರಕ್ಕೆ ಸೂಚನೆ ನೀಡಿದರು.

ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ಮಳೆಯಿಂದ ಶಿಥಿಲಗೊಂಡಿರುವ ಶಾಲೆಗಳ ಬಗ್ಗೆ ವರದಿ ಕೊಡುವಂತೆ ಸೂಚಿಸಿದರು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆಗೆ ಶಿಕ್ಷಣ ಸಚಿವರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಸವಳಂಗದಲ್ಲಿ ಅತಿವೃಷ್ಟಿ: ಸವಳಂಗ, ಸಾಸ್ವೇಹಳ್ಳಿ ಹಾಗೂ ಹೊನ್ನಾಳಿಯಲ್ಲಿ ದಾಖಲೆ ಮಳೆಯಾಗಿದ್ದು, ಹೊನ್ನಾಳಿಯಲ್ಲಿ 80 ಮಿ.ಮೀ, ಸವಳಂಗ 101, ಬೆಳಗುತ್ತಿ 78.8, ಹರಳಹಳ್ಳಿ 75.2, ಗೋವಿನಕೋವಿ 66.6, ಕುಂದೂರು 16.8, ಸಾಸ್ವೇಹಳ್ಳಿ 91.2 ಮಿ.ಮೀ.ನಷ್ಟು ದಾಖಲೆ ಮಳೆಯಾಗಿದೆ. ಚಿಕ್ಕಮಗಳೂರು- ಶಿವಮೊಗ್ಗ ಭಾಗದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ನದಿ ನೀರಿನ ಮಟ್ಟ 8.600 ಮೀಟರ್‌ಗೆ ಏರಿಕೆಯಾಗಿದೆ.