ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ್ದ ಮಳೆ ಕ್ಷೀಣಗೊಂಡಿದೆ.
ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ಶನಿವಾರ ಬೆಳಗ್ಗಿನಿಂದಲೇ ಬಿಸಿಲಿನ ವಾತಾವರಣ ಕಂಡುಬಂತು.
ಅಧಿಕಾರಿಗಳ ಭೇಟಿ: ಕಳೆದ ಒಂದುವಾರದಿಂದ ಹಾನಿಗೀಡಾದ ಸ್ಥಳಗಳಿಗೆ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ ಭೇಟಿ ನೀಡಿದರು. ಅವರು ಸೋಮವಾರಪೇಟೆ ಹೋಬಳಿ ಕುಂಬೂರು ಹಾಗೂ ಜಂಬೂರು ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳನ್ನು ಪರಿಶೀಲನೆ ನಡೆಸಿದರು. ನಂತರ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ೨೪ಗಂಟೆಯಲ್ಲಿ ೪೪.೨೧ ಮಿ.ಮೀ. ಮಳೆ: ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೪.೨೧ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೨೬.೭೮ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೪೧.೯೫ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೨೨.೫೦ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧೪.೭೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧೫.೧೦ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೧೭೬, ನಾಪೋಕ್ಲು ೮೦, ಸಂಪಾಜೆ ೧೧೮.೫೦, ಭಾಗಮಂಡಲ ೧೩೨.೬೦, ವಿರಾಜಪೇಟೆ ೪೧.೪೦, ಅಮ್ಮತ್ತಿ ೪೨.೫೦, ಹುದಿಕೇರಿ ೨೮, ಶ್ರೀಮಂಗಲ ೩೧, ಪೊನ್ನಂಪೇಟೆ ೨೦, ಬಾಳೆಲೆ ೧೧, ಸೋಮವಾರಪೇಟೆ ೧೪.೮೦, ಶನಿವಾರಸಂತೆ ೪, ಶಾಂತಳ್ಳಿ ೨೪, ಕೊಡ್ಲಿಪೇಟೆ ೧೬, ಕುಶಾಲನಗರ ೬, ಸುಂಟಿಕೊಪ್ಪ ೨೪.೨೦ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಶನಿವಾರ ೨೮೪೮.೬೭ ಅಡಿ ನೀರು ಸಂಗ್ರಹವಾಗಿದೆ. ನೀರಿನ ಒಳಹರಿವು ೬೦೫೦ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೧೦೦ ಕ್ಯುಸೆಕ್ ನೀರುಬಿಡಲಾಗುತ್ತಿದೆ.