ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಸಾಗರ, ಸಿದ್ದಾಪುರ, ಶಿರಸಿ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿಯಲ್ಲೂ ಮಳೆ ಅಬ್ಬರಿಸುತ್ತಿರುವ ಕಾರಣ ಗುಂಡಬಾಳ, ಅಘನಾಶಿನಿ ನದಿಗಳು ಉಕ್ಕಿ ಹರಿದು ವಿವಿಧ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.
ಭಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟುತ್ತಿದ್ದ ವ್ಯಕ್ತಿ ಕೊಚ್ಚಿಕೊಂಡು ಹೋದ ಘಟನೆ ಹೊನ್ನಾವರದ ಅನಂತವಾಡಿ ಮಠಾಕೇರಿ ಸಮೀಪ ಶುಕ್ರವಾರ ನಡೆದಿದೆ.
ಖಾಸಗೇರಿಯ ಜನಾರ್ದನ ರಾಮ ಮರಾಠಿ(45) ಮೃತ ವ್ಯಕ್ತಿ. ಶುಕ್ರವಾರ ಬೆಳಗ್ಗೆ ತಮ್ಮ ಮನೆಯಿಂದ ಮಠಾಕೇರಿಗೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಹಳ್ಳದಲ್ಲಿ ಭಾರಿ ನೀರಿನ ಹರಿವು ಇದ್ದು, ಆ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರದಲ್ಲಿ 10, ಕುಮಟಾದಲ್ಲಿ 2, ಕಾರವಾರದಲ್ಲಿ 1 ಸೇರಿ ಒಟ್ಟು 13 ಕಾಳಜಿ ಕೇಂದ್ರ ತೆರೆದು ಒಟ್ಟು 217 ಜನರನ್ನು ಅಲ್ಲಿ ಆಶ್ರಯ ನೀಡಲಾಗಿದೆ.ಅದಬ್ಬಿ ಸಮುದ್ರ ಕಡೆಯಿಂದ ಭಾರಿ ಗಾಳಿ ಬೀಸುತ್ತಿದ್ದು, ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು, ವಿವಿಧೆಡೆ ವಿದ್ಯುತ್ ಕಡಿತವಾಗಿದೆ. ಅಡಕೆ ತೋಟಗಳು, ಗದ್ದೆಗಳಿಗೂ ನೀರು ನುಗ್ಗಿದೆ. ಜು.29 ರವರೆಗೂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆರೇಂಜ್ ಅಲರ್ಟ್ ಘೋಷಿಸಿದೆ.
ಮಳೆಯ ಪ್ರಮಾಣ:
ಶುಕ್ರವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 78.2, ಮಿಮೀ, ಭಟ್ಕಳ-109, ಹಳಿಯಾಳ -8.6, ಹೊನ್ನಾವರ -93.3, ಕಾರವಾರ -82.2, ಕುಮಟಾ- 104.6, ಮುಂಡಗೋಡ -15.8, ಸಿದ್ದಾಪುರ -89.5, ಶಿರಸಿ -70.3, ಜೊಯಿಡಾ-39.3, ಯಲ್ಲಾಪುರ -30.7, ದಾಂಡೇಲಿ- 15.5, ಮಿಲಿ ಮೀಟರ್ ಮಳೆ ಸುರಿದಿದೆ. 4 ಮನೆಗಳಿಗೆ ಪೂರ್ಣಹಾನಿ ಹಾಗೂ 2 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.
ಲಿಂಗನಮಕ್ಕಿ ಅಣೆಕಟ್ಟೆಯಿಂದ ನೀರು ಬಿಡುವ ಎಚ್ಚರಿಕೆ
ಶರಾವತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಅಣೆಕಟ್ಟೆ ಭರ್ತಿ ಹಂತ ತಲುಪಿದ್ದು, ನೀರು ಬಿಡುವ ಎರಡನೇ ಮುನ್ನೆಚ್ಚರಿಕೆ ನೋಟಿಸ್ ಹೊರಡಿಸಲಾಗಿದೆ. 1819 ಅಡಿ ಜಲಾಶಯದ ಗರಿಷ್ಠ ಮಟ್ಟವಿದ್ದು, ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಜಲಾಶಯದಲ್ಲಿ 1806.80 ಅಡಿ (ಶೇ.75.13) ರಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದೇ ರೀತಿ ನೀರಿನ ಒಳ ಹರಿವು ಮುಂದುವರಿದಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹೊರಬಿಡಲಾಗುವುದು. ಅಣೆಕಟ್ಟೆಯ ಕೆಳದಂಡೆಯಲ್ಲಿ ನದಿ ಪಾತ್ರದಲ್ಲಿರುವ ಜನರು, ತಮ್ಮ ಜಾನುವಾರು ಹಾಗೂ ಅಗತ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಕೆಪಿಸಿ ಕಾರ್ಗಲ್‌ನ ಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲೆ, ಕಾಲೇಜ್‌ಗಳಿಗೆ ರಜೆ
ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಜು.26 ರಂದು ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಸೇರಿ ಐದು ತಾಲೂಕುಗಳ ಎಲ್ಲ ಅಂಗನವಾಡಿ, ಪ್ರಾಥಮಿ, ಪ್ರೌಢ ಶಾಲೆಗಳು, ಪದವಿಪೂರ್ವ ಹಾಗೂ ಎಲ್ಲ ಕಾಲೇಜ್‌ಗಳಿಗೆ (ಪರೀಕ್ಷೆ ಹೊರತುಪಡಿಸಿ) ರಜೆ ಘೋಷಿಸಿ ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.