ಜಿಲ್ಲೆ

ಜಿಲ್ಲೆಯಲ್ಲಿ ಇನ್ನೆರಡು ದಿನ ರೆಡ್‌ ಅಲರ್ಟ್‌

Uttara Kannada - Subash Hegde

ಕಾರವಾರ:ಜಿಲ್ಲೆಯ ಕರಾವಳಿಯಲ್ಲಿ ಉತ್ತಮ ಮಳೆ ಮುಂದುವರಿದಿದ್ದು, ಮಲೆನಾಡಿನಲ್ಲಿ ಸ್ವಲ್ಪ ಕಡಿಮೆಯಾಗಿದೆ. ಇನ್ನೂ ಎರಡು ದಿನ ಎಂದರೆ, ಜು.11 ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ.
ಭಾನುವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 102.4 ಮಿಮೀ, ಭಟ್ಕಳ-118.2, ಹೊನ್ನಾವರ-80.1, ಕಾರವಾರ-108.4, ಕುಮಟಾ-66.4 ಮಿಮೀ ಮಳೆಯಾಗಿದೆ. ಹಳಿಯಾಳ-11.5, ಮುಂಡಗೋಡ-19.4, ಸಿದ್ದಾಪುರ-65.7, ಶಿರಸಿ-54.5, ಜೊಯಿಡಾ-53.5, ಯಲ್ಲಾಪುರ-35.4, ದಾಂಡೇಲಿ 14.8 ಮಿಮೀ ಮಳೆಯಾಗಿದೆ. ಮಳೆಯಿಂದ ವಿವಿಧೆಡೆ ಹಾನಿ ಸಂಭವಿಸಿದೆ.

ಭಟ್ಕಳ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು ಪ್ರತಿ ವರ್ಷದಂತೆ ಈ ವರ್ಷವು ಕೂಡ ಭಟ್ಕಳ ಶಂಸುದ್ದೀನ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಮಳೆ ನೀರು ನಿಂತು ವಾಹನ ಜಲಾವೃತವಾದರೆ ಭಾನುವಾರ ಮಳೆ ಕೊಂಚ ಬಿಡುವು ನೀಡಿದ್ದು ಜನರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಶನಿವಾರ ಬೆಳ್ಳಿಗ್ಗೆಯಿಂದ ರವಿವಾರ ಬೆಳ್ಳಿಗ್ಗೆ ತನಕ ತಾಲೂಕಿನಲ್ಲಿ 108.8 ಮಿ.ಮಿ ಮಳೆಯಾಗಿದೆ. ಶನಿವಾರ ನಿರಂತರ ಮಳೆಗೆ ಪಟ್ಟಣದ ಶಂಸುದ್ದೀನ್ ವೃತ್ತ ಹಾಗೂ ರಂಗಿನಕಟ್ಟೆಯ ಬಳಿ ಚತುಷ್ಪಥ ಹೆದ್ದಾರಿ ಮೇಲೆ ನೀರು ನಿಂತು,ಕೆಲ ಕಾಲ ನದಿಯಂತೆ ಮಾರ್ಪಾಡಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರು ಸಂಚರಿಸಲು ಪರದಾಡುವಂತಾಗಿದ್ದು, ಅನೇಕರು ಕೆಲಕಾಲ ರಸ್ತೆಬದಿಯಲ್ಲಿ ಸವಾರಿ ನಿಲ್ಲಿಸಿ ಮಳೆ ಕಡಿಮೆಯಾಗುವುದನ್ನೇ ಕಾಯುತ್ತಿದ್ದ ದೃಶ್ಯ ಕಂಡುಬಂತು.

ಇತ್ತ ಬೆಳೆಕೆ ಎಂ.ಎಂ.ರೆಸಾರ್ಟ್ ಸಮೀಪ ವ್ಯಕ್ತಿಯೋರ್ವರು ತಮ್ಮ ವೈಯಕ್ತಿಕ ಜಾಗದಲ್ಲಿ ಮಣ್ಣು ಹಾಕಿಕೊಂಡಿರುವುದರಿಂದ ಆ ಭಾಗದ ರಸ್ತೆಯಲ್ಲಿ ಮಳೆ ನೀರು ನಿಂತು ಸ್ಥಳೀಯರಿಗೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ ನಾಯ್ಕಡ್ ಆ ಭಾಗದ ನೂಡಲ್ ಅಧಿಕಾರಿ ಶಂಸುದ್ದೀನ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ತೆರಳಿ ಜೆಸಿಬಿ ಸಹಾಯದಿಂದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿ ಕೊಟ್ಟರು. ಈ ವೇಳೆ ಗ್ರಾಮೀಣ ಠಾಣೆಯ ಪೊಲೀಸ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದರು.