ಜಿಲ್ಲೆ

ಎಲ್ಲೆಂದರಲ್ಲಿ ನೀರು ನುಗ್ಗಿ ಪರದಾಟ

Mangaluru - Nishantha Narayana

ಪುತ್ತೂರು: ಭಾರಿ ಮಳೆಗೆ ನಗರ ವ್ಯಾಪ್ತಿಯ ಎಲ್ಲೆಂದರಲ್ಲಿ ನೀರು ನುಗ್ಗಿ ಜನರು ಓಡಾಡುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆ ಅಕ್ಕಪಕ್ಕದಲ್ಲಿ ನೀರು ನಿಂತು ಸಂಪೂರ್ಣ ಕೆರೆಯಾಗಿ ಪರಿವರ್ತನೆಯಾಗಿತ್ತು. ಅರುಣಾ ಟಾಕೀಸ್ ಕಡೆಯಿಂದ ಎಪಿಎಂಸಿ ಕಡೆಗೆ ಹೋಗುವ ವಾಹನ ಸವಾರರು ಪರದಾಡಿದರು.

ನೆಲ್ಲಿಕಟ್ಟೆ ಕ್ಯಾಂಪ್ಕೊ ನಿವೃತ್ತ ಉದ್ಯೋಗಿಗಳ ಬಡವಾಣೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ವರ್ಷದ ಹಿಂದೆಯೇ ನೀರು ನುಗ್ಗುವ ಸಮಸ್ಯೆಯ ಬಗ್ಗೆ ನಗರ ಸಭೆಗೆ ಪತ್ರ ನೀಡಿದ್ದು, ಅಗತ್ಯ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ. ಈಗ ಕೊಳಚೆ ನೀರು ನುಗ್ಗಿದ್ದು, ಅಧಿಕಾರಿಗಳು ಪರಿಹಾರ ಒದಗಿಸುವಲ್ಲಿ ಕೈಚೆಲ್ಲಿದ್ದಾರೆ.

ಚರಂಡಿಗಳಿಗೆ ನೀರು ಹೋಗುವ ದಾರಿಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದರಿಂದ ಬಪ್ಪಳಿಗೆ, ಬಲ್ನಾಡು ಭಾಗದಲ್ಲಿ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು. ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪೌರಾಯುಕ್ತ ಮಧು ಎಸ್. ಮನೋಹರ್ ಕಾರ್ಮಿಕರಂತೆ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.