ಪುತ್ತೂರು: ಕಬಕ ಕಾಯರ್ ಬಳ್ಳಿ ಸಮೀಪದಲ್ಲಿ ಖಾಸಗಿ ಜಾಗಕ್ಕೆ ಹೋಗಲು ಕಲ್ಲು ರಾಶಿ ಮೇಲೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಮಳೆಗೆ ತಗ್ಗುಪ್ರದೇಶಕ್ಕೆ ಮಣ್ಣು ನೀರು ನುಗ್ಗಿ ಅವಾಂತರ ಸೃಷ್ಟಿಸುವ ಜತೆಗೆ ಹಲವು ಮನೆಗಳವರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಸುಮಾರು ೫೦ ಅಡಿಗೂ ಎತ್ತರಕ್ಕೆ ಕಲ್ಲು ಮಣ್ಣು ರಾಶಿ ಹಾಕಿ ರಸ್ತೆ ನಿರ್ಮಾಣ ಮಾಡಿದ್ದು, ನೀರು ಹೋಗಲು ಅಗತ್ಯ ವ್ಯವಸ್ಥೆಯನ್ನು ಮಾಡದ ಕಾರಣ ಕೊಚ್ಚಿಕೊಂಡು ಹೋಗಿದೆ. ಕಾಮಗಾರಿಗಾಗಿ ಸರ್ಕಾರಿ ಭೂಮಿಯನ್ನೂ ಒತ್ತುವರಿ ಮಡಿಕೊಂಡಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಈಗ ಕಲ್ಲಿನ ರಾಶಿ ಅಪಾಯಕಾರಿಯಾಗಿದ್ದು, ತಗ್ಗುಪ್ರದೇಶದ ಜನರು ಜೀವ ಹಿಡಿಕೊಂಡು ಕೂರುವ ಸ್ಥಿತಿಯಿದೆ.
ಸ್ಥಳಕ್ಕೆ ಕಬಕ ಪಿಡಿಒ ಭೇಟಿ ನೀಡಿದ್ದು, ಕಂದಾಯ ಅಧಿಕಾರಿಗಳು ತಮಗೆ ಸಂಬಂಧವಿಲ್ಲದ್ದು ಎಂದು ನುಣುಚಿಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ತಹಸೀಲ್ದಾರ್, ಸಹಾಯಕ ಆಯುಕ್ತ, ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಬಗ್ಗೆ ದೂರು ನೀಡಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಯಿಂದಲೂ ತುರ್ತು ಸ್ಪಂದನೆ ಲಭಿಸಿಲ್ಲ.