ವಿಜಯವಾಣಿ ಸುದ್ದಿಜಾಲ ಮಧುರೆ
ಅಭಿವೃದ್ಧಿ ಕೆಲಸಗಳ ನೆಪದಲ್ಲಿ ಅವ್ಯವಸ್ಥೆಗೆ ಕಾರಣವಾಗುವ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಉದಾಸೀನದಿಂದಾಗಿ ಸಾರ್ವಜನಿಕರು ಪರದಾಡುವ ಸಾಕಷ್ಟು ಪ್ರಕರಣಗಳು ಕಂಡುಬರುತ್ತವೆ, ಇದರ ಸಾಲಿಗೆ ದೊಡ್ಡಬಳ್ಳಾಪುರ ತಾಲೂಕು ಮಧುರೆಯ ಕನಸವಾಡಿಯೂ ಸೇರಿದೆ.
ಹೌದು! ರಸ್ತೆಯ ಡಾಂಬರೀಕರಣದ ವೇಳೆ ರಸ್ತೆ ಬದಿಯ ಎರಡೂ ಚರಂಡಿಗಳನ್ನು ಮುಚ್ಚಿಹಾಕಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರಕ್ಕೆ ಕಾರಣವಾಗುತ್ತಿದೆ. ಮನೆಗಳು ಜವಾವೃತಗೊಂಡು ಸಾರ್ವಜನಿಕರು ಜಾಗರಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಸರಿಪಡಿಸುವಂತೆ ಪಂಚಾಯಿತಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಯಾರೋಬ್ಬರು ಸಮಸ್ಯೆಗೆ ದನಿಯಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚರಂಡಿ ಮುಚ್ಚಿದರು
ಮಧುರೆ ಹೋಬಳಿ ಶ್ರೀ ಶನಿಮಹಾತ್ಮ ದೇವಸ್ಥಾನದ ಕನಸವಾಡಿ ಭಾಗದಲ್ಲಿ ಈ ಹಿಂದೆ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸಲಾಗಿದೆ. ಇದರಿಂದ ರಸ್ತೆಯ ಎತ್ತವರೂ ಜಾಸ್ತಿಯಾಗಿದೆ. ಇದೇ ವೇಳೆ ರಸ್ತೆಯ ಎರಡೂ ಬದಿ ಇದ್ದಂಥ ಚರಂಡಿಗಳನ್ನು ಮುಚ್ಚಲಾಗಿದೆ. ಈ ಬಗ್ಗೆ ಕಾಮಗಾರಿ ನಡೆಯುವ ವೇಳೆಯೇ ಸ್ಥಳೀಯ ಪಂಚಾಯಿತಿಗೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಮುಂದೆ ಚರಂಡಿ ಮಾಡುತ್ತೇವೆ ಎಂದು ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಮಳೆಗಾಲದಲ್ಲಿ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ.
ರಸ್ತೆ ಅಭಿವೃದ್ಧಿ ವೇಳೆ ಎರಡೂ ಕಡೆಯ ಚರಂಡಿಗಳನ್ನು ಮುಚ್ಚಿಹಾಕಲಾಗಿದೆ. ಇದರಿಂದ ಮಳೆ ಬಂದರೆ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಮನೆಗಳು ಜಲಾವೃತಗೊಂಡು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಗೆ ಹಾಗೂ ಪಂಚಾಯಿತಿಗೆ ಮನವಿ ಮಾಡಿದ್ದೇವೆ. ತಾತ್ಕಾಲಿಕವಾಗಿ ಈಗ ಚರಂಡಿಯಲ್ಲಿನ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ.
ವಿಜಯ್‌ಕುಮಾರ್, ಸ್ಥಳೀಯ ಕನಸವಾಡಿ