ಮಳೆಗಾಗಿ ಪ್ರಾರ್ಥಿಸಿ ದಾವಣಗೆರೆ ತಾಲೂಕು ಹುಚ್ಚವನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವರುಗಳಾದ ಕರಿಯಮ್ಮ ಬಸವೇಶ್ವರ ಮತ್ತು ಆಂಜನೇಯ ಸ್ವಾಮಿಗಳಿಗೆ ಬುಧವಾರ ಗ್ರಾಮದ ಹಿರಿಯರು ಹಾಗೂ ಯುವಕರು ಕಂತೆ ಭಿಕ್ಷೆ ಸೇವೆ ನೆರವೇರಿಸಿದರು. 
ಜಿಲ್ಲೆ

ಮಳೆಗಾಗಿ ಪ್ರಾರ್ಥಿಸಿ ಹುಚ್ಚವ್ವನಹಳ್ಳಿಯಲ್ಲಿ ಕಂತೆ ಭಿಕ್ಷೆ ಸೇವೆ

ಹರ್ಷ ನ.ಪುರೋಹಿತ

ಮಾಯಕೊಂಡ: ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮಸ್ಥರು ಬುಧವಾರ ಮಳೆಗಾಗಿ ಪ್ರಾರ್ಥಿಸಿ ಗ್ರಾಮದೊಳಗೆ ಕಂತೆ ಭಿಕ್ಷೆ ಮಾಡುವ ಮೂಲಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹುಚ್ಚವನಹಳ್ಳಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಗ್ರಾಮ ದೇವತೆ ಕರಿಯಮ್ಮ, ಬಸವೇಶ್ವರ, ಆಂಜನೇಯ ದೇವರ ಹೆಸರಿನಲ್ಲಿ ಕಂತೆ ಭಿಕ್ಷಾ ಸೇವೆ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿ ಮಳೆ ಬೆಳೆ ಆಗದೇ ಇದ್ದಂತಹ ಸಂದರ್ಭಗಳಲ್ಲಿ ಈ ಕಂತೆ ಭಿಕ್ಷಾ ಸೇವೆಯನ್ನು ರೂಢಿಸಿಕೊಂಡು ಬಂದಿದ್ದಾರೆ.

ಮಳೆ ಬಾರದೆ ಇದ್ದಾಗ ಗ್ರಾಮಸ್ಥರು ದೇವಾಲಯದ ಬಳಿ ಸೇರಿ ಮೂರು ಅಥವಾ ಐದು ದಿನ ಕಂತೆ ಭಿಕ್ಷೆ ಸೇವೆ ಮಾಡಲು ನಿರ್ಧರಿಸುತ್ತಾರೆ. ನಂತರ ಗ್ರಾಮದೊಳಗೆ ಡಂಗೂರ ಸಾರಿಸಿ ವಿಷಯ ತಿಳಿ, ಪ್ರತಿ ದಿನ ಸಂಜೆ ಗ್ರಾಮದ ಒಬ್ಬ ಜಂಗಮ ಸ್ವಾಮಿಯೊಂದಿಗೆ ಯುವಕರು ಪ್ರತಿ ಮನೆಯಲ್ಲಿ ಮಾಡಿರುವ ಅಡುಗೆ ಪಡೆದುಕೊಂಡು ಬರುತ್ತಾರೆ.

ನಂತರ, ಗ್ರಾಮದ ಕರಿಯಮ್ಮ ಬಸವೇಶ್ವರ ಮತ್ತು ಆಂಜನೇಯ ದೇವರುಗಳಿಗೆ ವಿಶೇಷ ಅರ್ಚನೆ ಮಾಡಲಾಗುತ್ತದೆ. ಆಹಾರ ಪದಾರ್ಥಗಳನ್ನು ಬಂದಂತಹ ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲಾಗುತ್ತದೆ.

ಭಕ್ತಾದಿಗಳು ಮನೆಯಿಂದಲೇ ತಟ್ಟೆ ತಂದು ಪ್ರಸಾದ ಪಡೆದು ಊಟ ಮಾಡಿ ಮನೆಗೆ ಹೋಗುತ್ತಾರೆ. ಹೀಗೆ ಮಾಡಿದ ಮೂರು ಅಥವಾ ಐದು ದಿನ ಮುಗಿಯುವ ಒಳಗೆ ಮಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದು.

ಕಂತೆ ಭಿಕ್ಷಾ ಸೇವೆ: ಮಳೆ ಆರಂಭಗೊಂಡು ಇಂದಿನವರೆಗೂ ಹುಚ್ಚವ್ವನಹಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ಮಳೆ ಆಗಿಲ್ಲ ಎನ್ನುವ ಉದ್ದೇಶದಿಂದ ಕಳೆದ ನಾಲ್ಕು ದಿನದಿಂದ ಗ್ರಾಮದೊಳಗೆ ಗ್ರಾಮ ದೇವತೆ ಕರಿಯಮ್ಮ ಶ್ರೀ ಬಸವೇಶ್ವರ ಆಂಜನೇಯ ಸ್ವಾಮಿಗೆ ಕಂತೆ ಭಿಕ್ಷೆ ಸೇವೆ ಮಾಡಲಾಗುತ್ತಿದೆ. ಇನ್ನೂ ಒಂದು ದಿನ ಬಾಕಿ ಇದೆ. ಮುಗಿದ ನಂತರ ಕರಿಗಲ್ಲು ಪೂಜೆ ನಡೆಸಲಾಗುತ್ತದೆ.

ಹುಚ್ಚವ್ವನಹಳ್ಳಿ ಗ್ರಾಮದೊಳಗೆ ಅನಾದಿಕಾಲದಿಂದಲೂ ಮಳೆಗಾಗಿ ಪ್ರಾರ್ಥಿಸಿ ಕರಿಗಲ್ಲು ಪೂಜೆ, ಕಂತೆ ಭಿಕ್ಷಾ ಸೇವೆ, ಚನ್ನಗಿರಿ ತಾಲೂಕಿನ ಅಮ್ಮನಗುಡ್ಡಕ್ಕೆ ಹೋಗಿ ಕುಕ್ಕವಾಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಬರುವುದು ನಡೆದುಕೊಂಡು ಬಂದಿದೆ. ಆದ್ದರಿಂದ ಕಂತೆ ಭಿಕ್ಷಾ ಸೇವೆ ಹಮ್ಮಿಕೊಂಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಮುಖಂಡರಾದ ಜಿ.ಕೆ. ಕಲ್ಲಪ್ಪ, ಆರ್. ಕುಬೇರಪ್ಪ, ನಾಗರಾಜ್ ಎಂ.ಟಿ., ಸ್ವಾಮಿ, ಎಚ್.ಎಂ. ಸದಾಶಿವ್, ರೈತ ಮುಖಂಡ ಹುಚ್ಚವನಹಳ್ಳಿ ಗಣೇಶ್, ಗ್ರಾಪಂ ಸದಸ್ಯ ಆರ್.ಸಿ. ಗಣೇಶ್, ಉಪಾಧ್ಯಕ್ಷ ಕೆ.ಜಿ. ಸತೀಶ್, ತಿಪ್ಪೇಸ್ವಾಮಿ, ಗ್ರಾಮಸ್ಥರು ಇದ್ದರು.