ಹೆಸರು ಬಿತ್ತನೆ ಮಾಡಿದ ನಿಟ್ಟಾಲಿ ರೈತ ಮೊಡದತ್ತ ಮುಖ ಮಾಡಿರುವುದು. 
ಜಿಲ್ಲೆ

ಜಿಲ್ಲೆಯಲ್ಲಿ ಜೂ.7ರಿಂದ 11ರವರೆಗೆ ಜೋರು ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಜೂ.7ರಿಂದ 11ರವರೆಗೆ ಮೋಡ ಕವಿದ ವಾತಾವರಣದ ಜತೆಗೆ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಮೈಸೂರಿನ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗ ಮಾಹಿತಿ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವರದಿಯಂತೆ 7ರಂದು 45 ಮಿ.ಮೀ, 8ರಂದು 12, 9ರಂದು 12, 10ರಂದು 15 ಮತ್ತು 11ರಂದು 1 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಟ 32.6 ರಿಂದ 34.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ಕನಿಷ್ಟ 18.1 ರಿಂದ 18.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಂಭವವಿದೆ. ಗಾಳಿಯು ಪ್ರತಿ ಗಂಟೆಗೆ 16 ರಿಂದ 20 ಕಿ.ಮೀ ವೇಗದಲ್ಲಿ ಬೀಸಬಹುದು ಎಂದು ತಿಳಿಸಿದೆ.

ಇನ್ನು ಬೆಳೆಗಳನ್ನು ಕಟಾವು ಮಾಡಿದ ನಂತರ ಉಳಿಕೆಯನ್ನು ಸುಡಬಾರದು. ಬದಲಿಗೆ ಅವುಗಳನ್ನು ಎರೆಗೊಬ್ಬರ/ಕಾಂಪೋಸ್ಟ್ ತಯಾರಿಸಲು ಉಪಯೋಗಿಸಬಹುದು. ಅಂತೆಯೇ ಅರಿಶಿಣ ಬೆಳೆಗೆ ಗೆಡ್ಡೆ ಕೊಳೆರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಬಿತ್ತನೆ ಕೊಂಬುಗಳನ್ನು ಶೇ.0.3ರ ಮ್ಯಾಂಕೊಚೆಬ್ ಅಥವಾ 3 ಗ್ರಾಂ ಕ್ಯಾಪ್ಟಾನ್, 0.5 ಗ್ರಾಂ ಸ್ಟ್ರೆಪ್ಟೊಸೈಕ್ಲಿನ್, 2 ಮಿ.ಲೀ ಕ್ಲೋರೋಪೈರಿಫಾಸ್ ಅನ್ನು ಒಂದು ಲೀಟರ್ ನೀರಿನಲ್ಲಿ ಹಾಕಿದ ಮಿಶ್ರಣದಲ್ಲಿ ಅರಿಶಿಣದ ಗೆಡ್ಡೆಗಳನ್ನು ನಾಲ್ಕರಿಂದ ಎಂಟು ಗಂಟೆ ನೆನೆಸಬೇಕು. ಇದರಿಂದ ಗೆಡ್ಡೆ ಕೊಳೆಯುವುದು, ಗೆಡ್ಡೆ ಕೊರಕ ಬಾಧೆಯಿಂದ ನಿಯಂತ್ರಿಸಬಹುದು.

ಭತ್ತಕ್ಕೆ ಕುತ್ತಿಗೆ ರೋಗ ಬರುವ ಸಾಧ್ಯತೆ ಇರುವುದರಿಂದ ತೆನೆಯ ಕೆಳಭಾಗದಲ್ಲಿ ಕತ್ತಿನ ಮೇಲೆ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆ ಕಾಣಿಸಿಕೊಂಡು ಜೊಳ್ಳಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಕತ್ತಿನ ಭಾಗ ಮುರಿದು ತೆನೆ ಜೋತು ಬೀಳಬಹುದು. ಆದ್ದರಿಂದ ಕುತ್ತಿಗೆ ಬೆಂಕಿರೋಗ ಕಂಡುಬಂದಲ್ಲಿ ಬೆವಿಸ್ಟಿನ್ 1 ಗ್ರಾಂ ಔಷಧವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಕಬ್ಬಿನ ತರಗು ನಿರ್ವಹಣೆಗೆ ಸಂಬಂಧಿಸಿದಂತೆ ಕಟಾವು ಮುಗಿದ ಮೇಲೆ ಗರಿ ಅಥವಾ ತರಗನ್ನು ಜಮೀನಿನಲ್ಲಿಯೇ ಪರ್ಯಾಯ ಸಾಲುಗಳಲ್ಲಿ ಹರಡಿ ನೀರು ಹಾಯಿಸಬೇಕು. ಎಕರೆಗೆ 15 ಕಿ.ಗ್ರಾಂ ಯೂರಿಯವನ್ನು ಬೆರೆಸಿದ ಶೇ.5ರಷ್ಟು ಸಗಣಿಯ ಬಗ್ಗಡವನ್ನು ಚಿಮುಕಿಸಬೇಕು. ಪ್ಲೋರೋಟಸ್ ಸೂಕ್ಷ್ಮಾಣು ಜೀವಿಯನ್ನು ಎಕರೆಗೆ 4 ಕಿ.ಗ್ರಾಂ ಪ್ರಮಾಣದಲ್ಲಿ ಅಥವಾ ಎಕರೆಗೆ 1 ರಿಂದ 1.5 ಟನ್ ಸಕ್ಕರೆ ಕಾರ್ಖಾನೆ ಮಡ್ಡಿಗೊಬ್ಬರ ಹರಡುವುದರಿಂದ ತರಗನ್ನು ತ್ವರಿತವಾಗಿ ಕಳೆಯಿಸಬಹುದು ಎಂದು ಸಲಹೆ ನೀಡಿದೆ.