ಜಿಲ್ಲೆ

ಧಾರಾಕಾರ ಮಳೆಗೆ 29 ಕೋಟಿ ರೂ. ನಷ್ಟ: ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಕೆ

Chikkaballapur

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಆಸ್ತಿ-ಪಾಸ್ತಿ ಮತ್ತು ಬೆಳೆ ಹಾನಿ ಸೇರಿದಂತೆ ಬರೋಬ್ಬರಿ 29.05 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಮಳೆಗೆ 9 ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದರೆ, 172 ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಇದರ ಜತೆಗೆ ಅಲ್ಲಲ್ಲಿ ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಪರಿಹಾರವನ್ನು ಒದಗಿಸಲು ಸರ್ಕಾರಕ್ಕೆ 29.05 ಕೋಟಿ ರೂಪಾಯಿ ನಷ್ಟದ ಅಂದಾಜಿನ ಸಮಗ್ರ ವರದಿಯನ್ನು ಎಂದು ಜಿಲ್ಲಾಡಳಿತ ಸಲ್ಲಿಸಿದೆ.

ವಿವಿಧ ಬೆಳೆಗಳ ನಷ್ಟ: ಜಿಲ್ಲೆಯಲ್ಲಿ ವಾರ್ಷಿಕ 282.3 ಮಿ.ಮೀ ವಾಡಿಕೆ ಮಳೆ ಪೈಕಿ 589.9 ಮಿ.ಮೀ ಮಳೆ (ಆ.8ಕ್ಕೆ) ಬಿದ್ದಿದೆ. ಜುಲೈ, ಆಗಸ್ಟ್ ಮೊದಲ ವಾರದಲ್ಲಿ ಹೆಚ್ಚುವರಿ ಮಳೆ ಸುರಿದಿದೆ. ಇದರಿಂದ ಜಿಲ್ಲಾದ್ಯಂತ 48 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಮತ್ತು 382.65 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಕಳೆದ ಸಾಲಿನ ಹಿಂಗಾರು ಅವಧಿಯಲ್ಲಿ ಧಾರಾಕಾರ ಮಳೆಗೆ 63928.35 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯು ನಾಶವಾಗಿದ್ದು 391 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಪೈಕಿ 58,207 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಾಶದಿಂದ 271.89 ಕೋಟಿ ರೂ., 5643 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆ ನಾಶದಿಂದ 118.39 ಕೋಟಿ ರೂ., 78.34 ಹೆಕ್ಟೇರ್ ಪ್ರದೇಶದಲ್ಲಿನ ರೇಷ್ಮೆ ಬೆಳೆ ನಾಶದಿಂದ 78 ಲಕ್ಷ ರೂ. ನಷ್ಟವಾಗಿತ್ತು.

ಆಸ್ತಿಪಾಸ್ತಿಯೂ ನಾಶ: ಮಳೆಗೆ ಆಸ್ತಿ-ಪಾಸ್ತಿಯೂ ನಾಶವಾಗಿದ್ದು, 9 ಮನೆ ಸಂಪೂರ್ಣ ಹಾನಿ, 172 ಮನೆಗಳಿಗೆ ಸಣ್ಣಪುಟ್ಟ ಹಾನಿ, 197 ವಿದ್ಯುತ್ ಕಂಬಗಳು, 17 ಸಣ್ಣ ಸೇತುವೆಗಳು, 63 ನಗರ ಮತ್ತು 8 ಗ್ರಾಮೀಣ ರಸ್ತೆಗಳು, 65 ಅಂಗನವಾಡಿ, ಸಮುದಾಯ ಭವನಗಳು, 8 ವಿದ್ಯುತ್ ಪರಿವರ್ತಕ ಹಾನಿಗೊಳಗಾಗಿವೆ. ಇನ್ನು ಕುರಿ, ಮೇಕೆ, ಹಸುಗಳು ಸೇರಿ 22 ಜಾನುವಾರುಗಳು ಬಲಿಯಾಗಿವೆ. ಇನ್ನು ಕಳೆದ ಸಾಲಿನ ಹಿಂಗಾರು ಅವಧಿಯಲ್ಲಿ ಜಿಲ್ಲಾದ್ಯಂತ 99 ಮನೆಗಳು (ಶೇ.75ರಿಂದ ಶೇ.100 ರಷ್ಟು ಹಾನಿ), 999 ಮನೆಗಳು (ಶೇ.25ರಿಂದ ಶೇ.75ರಷ್ಟು ಹಾನಿ), 855 ಮನೆಗಳು (ಶೇ.15ರಿಂದ ಶೇ.25ರಷ್ಟು ಹಾನಿ) ಸೇರಿ 1953 ಮನೆಗಳು ಹಾನಿಯಾಗಿವೆ. ಇದರ ಜತೆಗೆ ರಸ್ತೆ, ಸೇತುವೆ, ಶಾಲಾ ಕಟ್ಟಡ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯುತ್ ಕಂಬಗಳು ಹಾನಿಗೊಂಡು ಕೋಟ್ಯಂತರ ರೂ. ನಷ್ಟ ಉಂಟಾಗಿತ್ತು. ಇನ್ನು ದನಕರು, ಕುರಿ, ಮೇಕೆ ಸೇರಿ 53 ಜಾನುವಾರುಗಳು ಬಲಿಯಾಗಿದ್ದವು.

ಕುಂಟುತ್ತಿರುವ ಪರಿಹಾರ ಕೆಲಸ: ಕಳೆದ ಹಿಂಗಾರು ಅವಧಿಯಲ್ಲಿ ಸಂಭವಿಸಿದ ಕೆರೆ, ರಾಜಕಾಲುವೆಗಳ ಹಾನಿಯ ಪರಿಹಾರದ ಕೆಲಸಗಳು ಕುಂಟುತ್ತ ಸಾಗುತ್ತಿವೆ. ಶಿಡ್ಲಘಟ್ಟ ತಾಲೂಕು ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಕಟ್ಟೆ ಒಡೆದು 8 ತಿಂಗಳಾದರೂ ದುರಸ್ತಿ ಬೆಳವಣಿಗೆಯು ಇನ್ನು ಡಿಪಿಆರ್‌ನಲ್ಲಿಯೇ ಇದೆ. ಇದಕ್ಕೆ ಈಗಾಗಲೇ ಸ್ಥಳೀಯ ರೈತರು ಸೂಕ್ತ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಕೆರೆ ವೀಕ್ಷಿಸಿ, ತ್ವರಿತವಾಗಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ, ರಸ್ತೆ ಹಾಗು ಕೆರೆ ಕಟ್ಟೆ ದುರಸ್ತಿ ಪ್ರಕ್ರಿಯೆ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತ್ವರಿತ ಪರಿಹಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿ ಬರ, ಅತಿವೃಷ್ಟಿ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಆಸ್ತಿಪಾಸ್ತಿ, ಬೆಳೆ ನಷ್ಟ ಅನುಭವಿಸುತ್ತಿದೆ. ಕರೊನಾ ಸೋಂಕಿನ ಆತಂಕದ ಅವಧಿಯಲ್ಲಿ ಹೆಚ್ಚಿನ ಸಂಪಾದನೆ ಇಲ್ಲದೇ ವಿವಿಧ ವಲಯಗಳು ಹಿನ್ನಡೆ ಅನುಭವಿಸಿದ್ದು, ಅದರಲ್ಲೂ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸರ್ಕಾರದಿಂದ ತ್ವರಿತ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.