ಜಿಲ್ಲೆ

ಮೈಸೂರಿನಲ್ಲಿ ಐದು ದಿನ ಮಳೆ ಸಾಧ್ಯತೆ

ಸದೇಶ್ ಕಾರ್ಮಾಡ್

ಮೈಸೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮಂಗಳವಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಜಿಟಿಜಿಟಿ ಮಳೆ ಸುರಿಯಿತು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 5 ದಿನಗಳ ಕಾಲ ತುಂತುರುವಿನಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರು ಮಳೆ ಸುರಿಯಿತು. ಮಳೆಯಿಂದಾಗಿ ಜನರು ಛತ್ರಿ, ಜರ್ಕಿನ್‌ನೊಂದಿಗೆ ಮನೆಯಿಂದ ಹೊರ ಬರುತಿದ್ದ ದೃಶ್ಯಗಳು ಕಂಡು ಬಂತು. ಮೋಡ ಮುಸುಕಿದ ವಾತಾವರಣ ಹಾಗೂ ಮಳೆ ಜಿನಿಗುತ್ತಿರುವುದರಿಂದ ವಾತಾವರಣ ತಂಪಾಗಿದ್ದು, ಚಳಿಯ ಅನುಭವ ಉಂಟಾಗುತ್ತಿದೆ.

ಅ.20ರವರೆಗೆ ಮಳೆ: ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗ ಕ್ಷೇತ್ರ ವಿಭಾಗದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅ.16 ರಿಂದ 20ರವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರುವಿನಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅ.16 ರಂದು 22 ಮಿ.ಮೀ., 17 ರಂದು 30 ಮಿ.ಮೀ., 18 ರಂದು 22 ಮಿ.ಮೀ., 19 ರಂದು 12 ಮಿ.ಮೀ., 20 ರಂದು 11 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ 10 ರಿಂದ 20, ಗರಿಷ್ಠ 23 ರಿಂದ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದ್ದು, ಗಾಳಿಯು ಗಂಟೆಗೆ 3 ರಿಂದ 7 ಕಿ.ಮೀ. ವೇಗದಲ್ಲಿ ಬೀಸಲಿದೆ.

ತಾಲೂಕುವಾರು ಮಳೆ ವಿವರ: ಎಚ್.ಡಿ. ಕೋಟೆ ತಾಲೂಕಿನಲ್ಲಿ ಅ.16 ರಂದು 14 ಮಿ.ಮೀ., 17 ರಂದು 15.5 ಮಿ.ಮೀ., 18 ರಂದು 7.2 ಮಿ.ಮೀ., 19 ರಂದು 6.2 ಮಿ.ಮೀ., 20 ರಂದು 3.6 ಮಿ.ಮೀ., ಹುಣಸೂರು ತಾಲೂಕಿನಲ್ಲಿ ಅ.16 ರಂದು 25.5 ಮಿ.ಮೀ., 17 ರಂದ 22.4 ಮಿ.ಮೀ., 18 ರಂದು 7.6 ಮಿ.ಮೀ., 19 ರಂದು 8.5 ಮಿ.ಮೀ., 20 ರಂದು 5.4 ಮಿ.ಮೀ., ಕೆ.ಆರ್. ನಗರ ತಾಲೂಕಿನಲ್ಲಿ ಅ.16 ರಂದು 26.1 ಮಿ.ಮೀ, 17 ರಂದು 21.6 ಮಿ.ಮೀ., 18 ರಂದು 9.2 ಮಿ.ಮೀ., 19 ರಂದು 9.1 ಮಿ.ಮೀ., 20 ರಂದು 7.1 ಮಿ.ಮೀ., ಮೈಸೂರು ತಾಲೂಕಿನಲ್ಲಿ ಅ.16 ರಂದು 13.7 ಮಿ.ಮೀ., 17 ರಂದು 23.6 ಮಿ.ಮೀ., 18 ರಂದು 11 ಮಿ.ಮೀ., 19 ರಂದು 8.3 ಮಿ.ಮೀ., 20 ರಂದು 7 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.

ನಂಜನಗೂಡು ತಾಲೂಕಿನಲ್ಲಿ ಅ.16 ರಂದು 17.8. ಮಿ.ಮೀ., 17 ರಂದು 17.1 ಮಿ.ಮೀ., 18 ರಂದು 8.4 ಮಿ.ಮೀ., 19 ರಂದು 8.5 ಮಿ.ಮೀ., 20 ರಂದು 4.5 ಮಿ.ಮೀ., ಪಿರಿಯಾಪಟ್ಟಣ ತಾಲೂಕಿನಲ್ಲಿ ಅ.16 ರಂದು 22.5 ಮಿ.ಮೀ., 17 ರಂದು 20.1 ಮಿ.ಮೀ., 18 ರಂದು 8.4 ಮಿ.ಮೀ., 19 ರಂದು 8.5 ಮಿ.ಮೀ., 20 ರಂದು 4.5 ಮಿ.ಮೀ., ತಿ.ನರಸೀಪುರ ತಾಲೂಕಿನಲ್ಲಿ ಅ.16 ರಂದು 12.4 ಮಿ.ಮೀ., 17 ರಂದು 21.3 ಮಿ.ಮೀ., 18 ರಂದು 9.5 ಮಿ.ಮೀ., 19 ರಂದು 6.8 ಮಿ.ಮೀ. ಹಾಗೂ 20 ರಂದು 3 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಐದು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹೊಲಗಳಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಬೇಕು. ಸಾಕಷ್ಟು ಒಳ ಚರಂಡಿ ವ್ಯವಸ್ಥೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ಆರ್ದ್ರತೆಯಿಂದ ವಿಶೇಷವಾಗಿ ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ರೋಗ ಹರಡುವ ಸಾಧ್ಯತೆ ಇದ್ದು, ರೈತರು ನಿಯಮಿತವಾಗಿ ಬೆಳೆಗಳ ಮೇಲ್ವಿಚಾರ ಮಾಡಬೇಕು.
ಡಾ.ಸಿ.ರಾಮಚಂದ್ರ,
ಹಿರಿಯ ಕ್ಷೇತ್ರ ಅಧೀಕ್ಷಕ, ನಾಗಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ

ಜಿಲ್ಲೆಯಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಕೆಲವು ಭಾಗಗಳಲ್ಲಿ ಭತ್ತಕ್ಕೆ ಕೊಳೆ ರೋಗ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ. ಕಳೆದ ವರ್ಷ ಬರಗಾಲದಿಂದ ರೈತಾಪಿ ವರ್ಗದವರಿಗೆ ಬೆಳೆ ಬೆಳೆಯಲು ಸಾಧ್ಯವಾಗದೆ ನಷ್ಟ ಅನುಭವಿಸಿದ್ದರು. ಮಳೆಯ ಆರ್ಭಟ ರೈತಾಪಿ ವರ್ಗದವರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕಂದಾಯ ಹಾಗೂ ಕೃಷಿ ಇಲಾಖೆ ತಕ್ಷಣ ರೈತರು ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾರ್ಗದರ್ಶನ ನೀಡಬೇಕು ಹಾಗೂ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಬೇಕು.
ಅತ್ತಹಳ್ಳಿ ದೇವರಾಜ್,
ರೈತ ಮುಖಂಡ