ಜಿಲ್ಲೆ

ವರುಣನ ಅಬ್ಬರಕ್ಕೆ ಗಿರಿ ಜಿಲ್ಲೆಯಲ್ಲಿ ಕಂದಮ್ಮ ಬಲಿ

ಯಾದಗಿರಿ ಜಿಲ್ಲೆ ವಿವಿಧೆಡೆ ಭಾರಿ ಮಳೆ | ಚಟ್ನಳ್ಳಿಯಲ್ಲಿ ೨೦ ಮನೆಗೆ ಹಾನಿ | ಯರಗೋಳ ಸುತ್ತ ಕರೆಂಟ್ ಇಲ್ಲದೆ ಪರದಾಟ | ಮರ ಬಿದ್ದು ವಾಹನ ಜಖಂ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಮೂರನೇ ದಿನವೂ ಗಿರಿ ನಗರ ಸೇರಿ ಜಿಲ್ಲೆಯ ಶಹಾಪುರ, ಗುರುಮಠಕಲ್, ಹುಣಸಗಿ ತಾಲೂಕಿನ ಹಲವೆಡೆ ಭಾನುವಾರ ಗುಡುಗು-ಸಿಡಿಲಿನೊಂದಿಗೆ ಬಿರುಸಿನ ಮಳೆಯಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುಮಠಕಲ್ ಪಟ್ಟಣದ ಉಪ್ಪಾರಗಡ್ಡ ಬಡಾವಣೆಯಲ್ಲಿ ಮಗು ಬಲಿಯಾಗಿದ್ದು, ಶಹಾಪುರ ತಾಲೂಕಿನ ಚಟ್ನಳ್ಳಿಯಲ್ಲಿ ೨೦ಕ್ಕೂ ಹೆಚ್ಚು ಮನೆ ಹಾನಿಗೊಳಗಾಗಿವೆ.
ನಗರದಲ್ಲಿ ಸಂಜೆ ಒಂದು ಗಂಟೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದು ತಂಪೆರೆದಿದೆ. ಆದರೆ ಇದರ ಹೊಡೆತಕ್ಕೆ ಹಲವೆಡೆ ಗಿಡ-ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸಂಚಾರಕ್ಕೂ ವ್ಯತ್ಯಯ ಉಂಟಾಗಿತ್ತು. ಮನೆ-ಮಳಿಗೆಗಳ ಮೇಲಿನ ಪತ್ರಾಸ್‌ಗಳು ಹಾರಿ ಹೋಗಿವೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿAದ ಕತ್ತಲು ಆವರಿಸಿದೆ. ಭಾನುವಾರ ರಜೆ ಇದ್ದುದರಿಂದ ಯಾದಗಿರಿ ಕೇಂದ್ರ ಸ್ಥಾನದಲ್ಲಿ ಯಾವೊಂದು ಇಲಾಖೆ ಅಧಿಕಾರಿ, ಸಿಬ್ಬಂದಿ ಇಲ್ಲದೆ ಜನ ಪರದಾಡಿದರು.
ಗುರುಮಠಕಲ್ ವರದಿ: ತಾಲೂಕಿನಲ್ಲಿ ರಭಸದ ಗಾಳಿಯೊಂದಿಗೆ ಸುರಿದ ಮಳೆಗೆ ಹಲವೆಡೆ ವಿದ್ಯುತ್ ಕಂಬ, ಮರಗಳು ಉರುಳಿದರೆ, ಉಪ್ಪಾರಗಡ್ಡ ಬಡಾವಣೆಯಲ್ಲಿ ಪತ್ರಾಸ್ ಮೇಲಿನ ಕಲ್ಲು ಬಿದ್ದು ತಿಮ್ಮಪ್ಪ-ಪದ್ಮಮ್ಮ ದಂಪತಿ ಪುತ್ರಿ ಮಾನಸ (೬) ಮೃತಪಟ್ಟಿದ್ದಾಳೆ. ರೈತ ತಿಮ್ಮಪ್ಪ ಮಗಳೊಂದಿಗೆ ಹೊಲಕ್ಕೆ ತೆರಳಿದ್ದ. ಮಧ್ಯಾಹ್ನ ಏಕಾಏಕಿ ಗುಡುಗು ಮಿಂಚಿನೊAದಿಗೆ ಶುರುವಾದ ಭಾರಿ ಗಾಳಿ ಮಳೆ ನೋಡಲು ಹೊರಬಂದ ಕಂದಮ್ಮಳ ಮೇಲೆ ಪತ್ರಾಸ್ ಮೇಲಿನಿಂದ ಬಿದ್ದ ಕಲ್ಲು ತಲೆ ಭಾಗಕ್ಕೆ ತಾಗಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಯಾದಗಿರಿ ಮುಖ್ಯ ರಸ್ತೆಯ ಆನಂದ ಕಾಂಪ್ಲೆಕ್ಸ್ ಎದುರು ಬೃಹತ್ ಮರವೊಂದು ವಾಹನದ ಮೇಲೆ ಬಿದ್ದರೆ, ಎಪಿಎಂಸಿ, ಬಸ್ ನಿಲ್ದಾಣ ಸೇರಿ ಜೆಸ್ಕಾಂನ ಎರಡು ವಾಹನಗಳ ಮೇಲೆ ಮರದ ಕೊಂಬೆಗಳು ಬಿದ್ದಿವೆ. ಇದರಿಂದ ಕೆಲಕಾಲ ಮುಖ್ಯ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಾರಾಯಣಪುರ ಬಡಾವಣೆಯ ಹಿರಿಯ ಪತ್ರಕರ್ತ ಬಸವರಾಜ ಬೂದಿ ಅವರ ಮನೆ ಮೇಲಿನ ಪತ್ರಾಸಗಳು (ಟಿನ್ ಶೆಡ್) ಎರಡನೇ ಮಹಡಿಯಿಂದ ಹಾರಿ ನೆಲಕ್ಕುರುಳಿವೆ. ವಿದ್ಯುತ್ ಕಂಬಗಳು, ಸರ್ವೀಸ್ ವೈರ್ ನೆಲಕಚ್ಚಿದ್ದು, ಜೆಸ್ಕಾಂ ಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪಟ್ಟಣದ ಬಸವೇಶ್ವರ ಗಂಜ್, ಹಳೆಯ ತಹಸಿಲ್ ಕಚೇರಿ, ಹರಿಜನವಾಡ, ಲಕ್ಷಿö್ಮÃನಗರ, ಬಾಲಾಜಿ ನಗರ, ಉಪ್ಪರಗಡ್ಡ, ಚಂದ್ರಮ್ಮ ಟಾಕೀಸ್, ಖಾಸಾಮಠ ರಸ್ತೆ, ಪೆಟ್ರೋಲ್ ಬಂಕ್, ನಾರಾಯಣಪೇಟೆ ರಸ್ತೆ, ಮೋಮಿನಪುರ, ಗಜಲಮ್ಮ ಕಟ್ಟ ಇತರೆಡೆ ಬಅನೇಕ ಮರಳು ನೆಲಕ್ಕುರುಳಿವೆ.
ಮಧ್ಯಾಹ್ನ ಎರಡು ಗಂಟೆ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಗಟಾರ ನೀರು ಹರಿದಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪಟ್ಟಣದ ದಬದಬಿ ಫಾಲ್ಸ್ ತುಂಬಿ ಹರಿಯುತ್ತಿದ್ದು, ಇಳಿಸಂಜೆ ಜನರು ಜಲಪಾತ ವೀಕ್ಷಿಸಿ ಆನಂದಿಸಿದರು.