ಪಿರಿಯಾಪಟ್ಟಣ ತಾಲೂಕಿನ ಕೊಪ್ಪದಲ್ಲಿ ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಜಲಾವೃತಗೊಂಡ ರಸ್ತೆಯಲ್ಲಿ ವಾಹನ ಚಾಲಕರು ಪರದಾಡಿದರು. 
ಜಿಲ್ಲೆ

ಕೊಪ್ಪದಲ್ಲಿ ಮುಖ್ಯರಸ್ತೆ ಜಲಾವೃತ

ನಾಗೇಶ ಎಸ್

ಪಿರಿಯಾಪಟ್ಟಣ: ತಾಲೂಕಿನ ಕೊಪ್ಪದಲ್ಲಿ ಭಾನುವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಕೊಪ್ಪ ಗ್ರಾಮದ ಭಾರತ ಮಾತಾ ಶಾಲೆಯ ಮುಂಭಾಗದ ಮುಖ್ಯರಸ್ತೆ ಮಳೆಯಿಂದಾಗಿ ಪೂರ್ಣ ಜಲಾವೃತಗೊಂಡಿತ್ತು.

ವಾರಾಂತ್ಯದ ದಿನವಾಗಿದ್ದರಿಂದ ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಿಂದ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಪ್ರವಾಸಿಗರ ವಾಹನಗಳು ಮಳೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ನೀರು ತುಂಬಿದ್ದ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಲು ಹರಸಾಹಸ ಪಡುವಂತಾಯಿತು. ಕೊಪ್ಪ ಗ್ರಾಮದಲ್ಲಿ ವಾಸವಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ ಅವರ ಮನೆಯ ಬಡಾವಣೆ ಪ್ರದೇಶ ಎತ್ತರ ಭಾಗದಲ್ಲಿದ್ದು, ಜೋರು ಮಳೆಯಾದಲ್ಲಿ ಈ ಪ್ರದೇಶದಿಂದ ರಸ್ತೆಗೆ ಹರಿದು ಬರುವ ನೀರು ಮುಖ್ಯರಸ್ತೆಯನ್ನು ದಾಟಿ ಕಾವೇರಿ ನದಿಗೆ ಸಂಪರ್ಕವಿರುವ ಕೊಲ್ಲಿಗೆ ಹೋಗುತ್ತದೆ.
ಆದರೆ ಮಳೆ ನೀರು ಕೊಲ್ಲಿಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಮುಖ್ಯ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಶಾಲಾ ದಿನಗಳಲ್ಲಿ ಈ ರಸ್ತೆಯು ವಿದ್ಯಾರ್ಥಿಗಳಿಂದ ತುಂಬಿದ್ದು, ಯಾವುದೇ ರೀತಿಯ ಅನಾಹುತವಾಗುವುದನ್ನು ತಪ್ಪಿಸಲು ತಾಲೂಕು ಆಡಳಿತ ಕೂಡಲೇ ಗಮನ ಹರಿಸಬೇಕು ಎಂದು ಆವರ್ತಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ.ಶಿವಕುಮಾರ್ ಒತ್ತಾಯಿಸಿದ್ದಾರೆ.