ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಸಾಧಾರಣ ಮಳೆಯಾಗಿ ಮಂಗಳವಾರ ರಾತ್ರಿಯಿಂದ ಬಿರುಸಿನ ಮಳೆಯಾಗುತ್ತಿದ್ದು ಕೆರೆ-ತೋಡುಗಳು ಭರ್ತಿಯಾಗಿವೆ. ಹೊಳೆಗಳಲ್ಲಿ ರಭಸದಿಂದ ನೀರು ಹರಿಯುತ್ತಿದೆ. ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ಬಲಮುರಿಯಲ್ಲಿ ಕಿರು ಸೇತುವೆ ಮುಳುಗಡೆಯಾಗಿದೆ.
ನಾಪೋಕ್ಲುವಿನಲ್ಲಿ 24 ಗಂಟೆಯಲ್ಲಿ 85.2 ಮಿ.ಮೀ., ಕಕ್ಕಬೆ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದಲ್ಲಿ 196.0 ಮಿ.ಮೀ. ಮಳೆ ಸುರಿದಿದೆ.
ಬಲ್ಲಮಾವಟಿ ಗ್ರಾಮದ ದೊಡ್ಡ ಪುಳಿಕೋಟು ಗ್ರಾಮ ವ್ಯಾಪ್ತಿಯಲ್ಲಿ 2021ರಲ್ಲಿ ಈ ಅವಧಿಗೆ 49.48 ಇಂಚು ಮಳೆಯಾಗಿದ್ದರೆ 2022ರಲ್ಲಿ 23.49 ಇಂಚು ಮಳೆಯಾಗಿದೆ. 2023ರಲ್ಲಿ 11.74 ಇಂಚು ಮಳೆ ಸುರಿದಿದ್ದರೆ ಈ ವರ್ಷ ಜನವರಿಯಿಂದ ಇದುವರೆಗೆ 32.20 ಇಂಚು ಮಳೆಯಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದೆ. ಎಮ್ಮೆಮಾಡು ಗ್ರಾಮದ ಕೂರುಳಿಯ ಖಾಲಿದ್ ಅವರ ಮನೆ ತಡೆಗೋಡೆ ಕುಸಿದು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಇಲಾಖೆಯ ಅಧಿಕಾರಿ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
.