Rainy weather 
ಜಿಲ್ಲೆ

ರಾಜ್ಯದ ಹಲವೆಡೆ ವಾರಪೂರ್ತಿ ಮಳೆ: ದಕ್ಷಿಣ ಕರ್ನಾಟಕದಲ್ಲಿ ತುಸು ಬಿರುಸು

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವೆಡೆ ಒಂದು ವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸೋಮವಾರವೂ ಮಳೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು,ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಏ.29ರಿಂದ ಮೇ 5ರವರೆಗೆ ವರ್ಷಧಾರೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿಯೂ ಮುಂದಿನ 3 ದಿನ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ.

ಕೆಲ ಭಾಗಗಳಲ್ಲಿ ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಇದರಿಂದ ಬಾಳೆ, ಪಪ್ಪಾಯ ಸೇರಿ ತೋಟಗಾರಿಕೆ ಬೆಳೆಗಳಿಗೆ ಮತ್ತು ಗುಡಿಸಲುಗಳಿಗೆ ಹಾನಿಯಾಗಲಿದೆ. ಸಡಿಲವಾದ ವಸ್ತುಗಳು ಹಾರಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಬೀದರ್​ನಲ್ಲಿ 43.2 ಡಿ.ಸೆ.ದಾಖಲು:ರಾಜ್ಯದ ಇತರೆ ಜಿಲ್ಲೆಗಳಗಿಂತ ಬೀದರ್​ನಲ್ಲಿ ಅತಿ ಹೆಚ್ಚು 43.2 ಡಿ.ಸೆ.ಉಷ್ಣಾಂಶ ಸೋಮವಾರ ದಾಖಲಾಗಿದೆ. ಉತ್ತರ ಕರ್ನಾಟಕದಲ್ಲಿ ಮುಂದಿನ 2 ದಿನ ತಾಪಮಾನ ಇಳಿಕೆಯಾಗಲಿದ್ದು, ನಂತರ 2-3 ಡಿ.ಸೆ. ಕ್ರಮೇಣ ಹೆಚ್ಚಳವಾಗಲಿದೆ. ಕರಾವಳಿ,ದಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಂದಿನ 5 ದಿನ ವಾತಾವರಣದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗಂಟೆಗೆ 40-50 ಕಿಮೀ.ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವೂ 34 ಡಿ.ಸೆ.ಮತ್ತು 23 ಡಿ.ಸೆ. ಇರಲಿದೆ.