ಮಂಗಳೂರು/ಉಡುಪಿ: ಐದಾರು ದಿನಗಳಿಂದ ದುರ್ಬಲ ಸ್ಥಿತಿಯಲ್ಲಿದ್ದ ಮುಂಗಾರು ಚುರುಕು ಪಡೆದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗಿನಿಂದ ಬಿಟ್ಟುಬಿಟ್ಟು ಸಾಧಾರಣದಿಂದ ಉತ್ತಮ ಮಳೆಯಾಗುತ್ತಿದೆ.
ಮಂಗಳೂರಿನಲ್ಲಿ ಬೆಳಗ್ಗೆ ಆರಂಭಗೊಂಡ ಮಳೆ ನಂತರ ಕೆಲಹೊತ್ತು ಬಿಡುವು ನೀಡಿ ಮಧ್ಯಾಹ್ನ ಮತ್ತೆ ಶುರುವಾಗಿದೆ. ಇದರಿಂದ ನಗರದ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಿಲ್ಲೆಯ ಒಳಭಾಗಗಳಾದ ಕಡಬ, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಬಂಟ್ವಾಳ, ಕಟೀಲು, ವಿಟ್ಲ ಸಹಿತ ಹಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ, ಶನಿವಾರ ಇಡೀ ದಿನ ನಿರಂತರ ಮಳೆ ಸುರಿದಿದೆ. ಕಾರ್ಕಳ, ಹೆಬ್ರಿ, ಕುಂದಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಉಡುಪಿ, ಮಣಿಪಾಲ, ಹಿರಿಯಡ್ಕ, ಬ್ರಹ್ಮಾವರ ಸುತ್ತಮುತ್ತ ಶನಿವಾರ ಮಧ್ಯಾಹ್ನವರೆಗೆ ನಿರಂತರ ಮಳೆಯಾಗಿದ್ದು, ಹೆದ್ದಾರಿಯಲ್ಲಿ ನೀರು ಸರಾಗವಾಗಿ ಹರಿಯದೆ ವಾಹನ ಓಡಾಟಕ್ಕೆ ಸಮಸ್ಯೆಯಾಯಿತು.
ಶನಿವಾರ ಬೆಳಗ್ಗೆ 8.30ರವರೆಗಿನ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉಡುಪಿ 10.0, ಬ್ರಹ್ಮಾವರ 9.6, ಕಾಪು 4.1, ಕುಂದಾಪುರ 15.3, ಬೈಂದೂರು 12.4, ಕಾರ್ಕಳ 14.3, ಹೆಬ್ರಿಯಲ್ಲಿ 19.0 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ 13.3 ಮಿ.ಮೀ. ಮಳೆ ದಾಖಲಾಗಿದೆ.
ಜೂನ್ 28ರಿಂದ ಜುಲೈ 1ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆ ಇದ್ದು, ನಾಲ್ಕು ದಿನಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಜೂ.28ರಿಂದ 30ರವರೆಗೆ ಬಿರುಸಿನ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಡುಗೆ ಮನೆ ಮೇಲ್ಛಾವಣಿ ಕುಸಿತ: ಕಾಪು: ಶನಿವಾರ ಬೆಳಗ್ಗೆ ಸುರಿದ ಗಾಳಿ ಮಳೆಯ ಪರಿಣಾಮ ಮೂಳೂರು ವೀರಮಾರುತಿ ಕಾಲನಿ ಸಮೀಪದ ಮನೆಯ ಅಡುಗೆ ಕೋಣೆಯ ಮೇಲ್ಛಾವಣಿ ಕುಸಿದು ರತ್ನಾ ಪುತ್ರನ್ ಎಂಬವರು ಗಾಯಗೊಂಡಿದ್ದಾರೆ. ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿಸಿದರು.
ಪಡುಬಿದ್ರಿ ಬೀಚ್‌ನಲ್ಲಿ ಕಡಲ್ಕೊರೆತ ತೀವ್ರ
ಪಡುಬಿದ್ರಿ: ಕಳೆದೊಂದು ವಾರದಿಂದ ಪಡುಬಿದ್ರಿ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಶನಿವಾರ ತೀವ್ರವಾಗಿದ್ದು, ವೀಕ್ಷಣಾ ಗೋಪುರ, ವಿಶ್ರಾಂತಿ ಶೆಡ್ ಕಡಲು ಸೇರುವ ಭೀತಿಯಲ್ಲಿವೆ. ಕಳೆದ ಬಾರಿಯೂ ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡ ವೇದಿಕೆ, ವಿದ್ಯುತ್ ಕಂಬಗಳು, ಇಂಟರ್‌ಲಾಕ್ ವ್ಯವಸ್ಥೆ ಹಾಗೂ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದವು. ಆಗ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್, ಪ್ರವಾಸೋದ್ಯಮ ಇಲಾಖೆ ನಿರ್ಮಾಣದ ಕಾಮಗಾರಿಗಳನ್ನು ತೆರವುಗೊಳಿಸಲು ಸೂಚಿಸಿದ್ದರು. ಆದರೂ ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಶೌಚಗೃಹ ನಿರ್ಮಿಸಲಾಗಿತ್ತು. ಈಗ ಕಡಲ್ಕೊರೆತ ಕಾಣಿಸಿಕೊಂಡಿರುವ ಅನತಿ ದೂರದಲ್ಲಿ ತಡೆಗೋಡೆ ಕಾಮಗಾರಿಯನ್ನೂ ನಡೆಸಲಾಗಿದ್ದು, ಅದರ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. ಹಲವು ತೆಂಗಿನ ಮರಗಳೂ ನೀರುಪಾಲಾಗಿವೆ.
ವೀಕ್ಷಣಾ ಗೋಪುರ ಉಳಿಸುವ ನಿಟ್ಟಿನಲ್ಲಿ ಬ್ಲೂಫ್ಲಾೃಗ್ ಬೀಚ್ ಕಾರ್ಮಿಕರು ಗೋಪುರದ ಬುಡದಲ್ಲೇ ಇದ್ದ ಮರಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಇಡುತ್ತಿದ್ದಾರೆ. ಈಗಾಗಲೇ ಹಾಕಿರುವ ಮರಳು ಚೀಲಗಳು ನೀರುಪಾಲಾಗುತ್ತಿದ್ದರೂ, ಮತ್ತೆ ಮರಳು ಚೀಲ ಹಾಕುವಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.