ಜಿಲ್ಲೆ

ಗ್ರಾಮಾಂತರದಲ್ಲಿ ಗಾಳಿಯಿಂದ ಹಾನಿ

Dakshina Kannada

ಮಂಗಳೂರು/ಬೆಳ್ತಂಗಡಿ/ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಸಂಜೆ ಗಾಳಿ, ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಮನೆ, ಕೃಷಿ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಗ್ರಾಮೀಣ ಭಾಗಗಳಲ್ಲಿ ಗಾಳಿ ಮಳೆಗೆ ಮರದ ಗೆಲ್ಲುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಸುಬ್ರಹ್ಮಣ್ಯ, ಪಂಜ, ಗುತ್ತಿಗಾರು, ಬೆಳ್ತಂಗಡಿಯ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬೆಳ್ತಂಗಡಿ, ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಕುಮಾರಧಾರಾ, ನೇತ್ರಾವತಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕೆಸರು ಮಿಶ್ರಿತ ಕೆಂಪು ಬಣ್ಣದ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂತು.

ವಿಟ್ಲ ಪೇಟೆ, ಕನ್ಯಾನ, ಮಾಣಿ ಭಾಗದಲ್ಲಿ ಮರಗಳು ಧರೆಗೆ ಉರುಳಿದ್ದು, ಹಲವು 18 ವಿದ್ಯುತ್ ಕಂಬಗಳು ತುಂಡಾಗಿವೆ. ಕಾಶಿಮಠದ ಒಳರಸ್ತೆಯಲ್ಲಿ ಮರ ಬಿದ್ದು ಒಂದು ಕಂಬ ತುಂಡಾಗಿದೆ. ಸ್ಥಳೀಯರು ಮರ ತೆರವು ಕಾರ್ಯ ಮಾಡುವ ಮೂಲಕ ಮೆಸ್ಕಾಂ ಅಧಿಕಾರಿಗಳಿಗೆ ಸಹಕಾರ ನೀಡಿದರು.

ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ವಿನೋದಾ ದೇವಾಡಿಗ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಸುರೇಶ್ ಎಂಬವರ ಮನೆಗೂ ಹಾನಿಯಾಗಿದೆ. ಶೀನ ಪೂಜಾರಿ ಎಂಬವರ ಮನೆಯ ಶೀಟುಗಳ ಹಾರಿ ಹೋಗಿವೆ.

ಪುತ್ತೂರು ಬಪ್ಪಳಿಗೆ ಪರಿಸರದಲ್ಲಿ ಸತತ ಒಂದು ಗಂಟೆ ಕಾಲ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಹಲವು ದಿನಗಳ ಬಳಿಕ ಗಾಳಿ ಮಳೆಯಾಗಿದೆ. ವಿಪರೀತ ಸೆಕೆಯಿಂದ ಬಳಲುತ್ತಿದ್ದ ನಗರದ ಮಂದಿಗೆ ತಂಪಿನ ಅನುಭವ ನೀಡಿದೆ. ಜಿಲ್ಲೆಯಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣವಿತ್ತು. ಆ ಬಳಿಕ ಮೋಡ ಹಾಗೂ ವಿಪರೀತ ಉರಿ ಸೆಕೆಯ ವಾತಾವರಣವಿತ್ತು.

ಉಡುಪಿಯಲ್ಲಿ ಸಾಧಾರಣ: ಉಡುಪಿ: ಜಿಲ್ಲೆಯಲ್ಲಿ ಶನಿವಾರ ಸಾಯಂಕಾಲ ಹೊತ್ತಲ್ಲಿ ಹಲವೆಡೆ ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಕಾರ್ಕಳ ಭಾಗದಲ್ಲಿ ಸಣ್ಣದಾಗಿ ಮಳೆಯಾಗಿದ್ದು, ಹೆಬ್ರಿ, ಬ್ರಹ್ಮಾವರ, ಪಡುಬಿದ್ರಿ, ಕುಂದಾಪುರ, ಉಡುಪಿ ಸುತ್ತಮುತ್ತ ಮೋಡ ಕವಿದ ವಾತಾವರಣದೊಂದಿಗೆ ಭಾರಿ ಗಾಳಿ ಬೀಸಿದೆ. ಕಳೆದ ಎರಡು ದಿನಗಳ ಗಾಳಿ ಮಳೆಗೆ ಜಿಲ್ಲೆಯ ಕೆಳಾರ್ಕಳಬೆಟ್ಟು, ಬ್ರಹ್ಮಾವರ ಆರೂರು ಭಾಗದಲ್ಲಿ ಮನೆಗಳಿಗೆ ಹಾನಿಯಾಗಿದೆ. ಶನಿವಾರ ಬೆಳಗ್ಗೆಯಿಂದ ಹಿಂದಿನ 24 ಗಂಟೆ ಅವಧಿಯಲ್ಲಿ 3.7 ಮಿ.ಮೀ. ಮಳೆಯಾಗಿದೆ.