ಜಿಲ್ಲೆ

ಮಂಡ್ಯ ಜಿಲ್ಲಾದ್ಯಂತ ದಿನವಿಡೀ ಸುರಿದ ಮಳೆ: ಕೃಷಿಕರ ಮೊಗದಲ್ಲಿ ಕೊಂಚ ಸಂತಸ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲಾದ್ಯಂತ ಸೋಮವಾರ ದಿನವಿಡೀ ಮಳೆ ಸುರಿಯಿತು.

ಭಾನುವಾರ ರಾತ್ರಿಯಿಂದಲೇ ಪ್ರಾರಂಭವಾದ ತುಂತುರು ಮಳೆ, ಸೋಮವಾರ ಪೂರ್ತಿ ಮುಂದುವರೆಯಿತು. ಆಗೊಮ್ಮೆ ಹೀಗೊಮ್ಮೆ ಜೋರು ಮಳೆ ಬರುತ್ತಿತ್ತು. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿಯಿತು. ಮಂಡ್ಯ ನಗರ ಮತ್ತು ನಾಗಮಂಗಲ, ಮದ್ದೂರು, ಕೆ.ಆರ್.ಪೇಟೆ, ಪಾಂಡವಪುರ, ಮಳವಳ್ಳಿ, ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಎಡೆಬಿಡದೇ ಮಳೆ ಸುರಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು.

ಇನ್ನು ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದ ಜಿಲ್ಲೆಯ ರೈತರಿಗೆ ಎರಡು ದಿನದಿಂದ ಸುರಿಯುತ್ತಿರುವ ಮಳೆ ಕೊಂಚ ನೆಮ್ಮದಿ ತಂದಿದೆ. ಅತ್ತ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟವೂ ಏರಿಕೆಯಾಗುತ್ತಿದ್ದು, ಇತ್ತ ವರುಣನ ದರ್ಶನವಾಗುತ್ತಿದೆ. ಇದರಿಂದಾಗಿ ಆಮೆಗತಿಯಲ್ಲಿದ್ದ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ.