ಜಿಲ್ಲೆ

ಹುಬ್ಬಳ್ಳಿಯಲ್ಲಿ ಜಡಿ ಮಳೆ

Dharwada - Basavaraj Idli

ಹುಬ್ಬಳ್ಳಿ: ಹಲವು ದಿನಗಳ ನಂತರ ನಗರದಲ್ಲಿ ಜಡಿ ಮಳೆ ಸುರಿದಿದ್ದು, ಚರಂಡಿ, ರಸ್ತೆಗಳು ತುಂಬಿ ಹರಿದವು.

ಕೈಕೊಟ್ಟ ಮುಂಗಾರು ಹಂಗಾಮಿನಲ್ಲಿ ಬೆಳೆ ಇಲ್ಲದೇ ಕಂಗಾಲಾಗಿರುವ ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಹಿಂಗಾರು ಹಂಗಾಮಿನಲ್ಲಾದರೂ ಒಂದಿಷ್ಟು ಬೆಳೆ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿ ಕೃಷಿಕರು ಇದ್ದಾರೆ.

ಇನ್ನು ಹುಬ್ಬಳ್ಳಿಯ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳ ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಒಂದು ತಾಸು ಸುರಿದ ಮಳೆಯು ಎಲ್ಲೆಡೆ ನೀರು ಹರಿಯುವಂತೆ ಮಾಡಿತು.

ಕಾಂಕ್ರಿಟ್ ಕಾಡಿನಂತಾಗುತ್ತಿರುವ ಹುಬ್ಬಳ್ಳಿಯಲ್ಲಿ ಇದೀಗ ಒಂದೇ ಒಂದು ದೊಡ್ಡ ಮಳೆ ಬಂದರೂ ರಸ್ತೆಗಳು ಜಲಾವೃತವಾಗುತ್ತಿವೆ. ಮಂಗಳವಾರ ಮಧ್ಯಾಹ್ನ 3.20ರ ಸುಮಾರಿಗೆ ಆರಂಭವಾದ ಮಳೆ ಒಂದು ತಾಸು ಸುರಿಯಿತು.

ಮಳೆ ಇಲ್ಲದೇ ಜಿಡ್ಡು ಗಟ್ಟಿದ್ದ ವಾತಾವರಣಕ್ಕೆ ಜೀವಕಳೆ ತುಂಬಿತು.
ಏಕಾಏಕಿ ಸುರಿದ ಮಳೆಯಿಂದ ಈ ವರೆಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಉತ್ತಮ ಮಳೆ ಸುರಿದಿದೆ ಎಂದು ತಹಸೀಲ್ದಾರ್ ಕಲಗೌಡ ಪಾಟೀಲ ತಿಳಿಸಿದರು.