ಫೋಟೋ 15 ಹನೂರು 2 ಹನೂರಿನಲ್ಲಿ ಆಗಾಗ್ಗೆ ಸುರಿಯುತ್ತಿದ್ದ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ತವಾಗಿತ್ತು. 
ಜಿಲ್ಲೆ

ಹನೂರು ತಾಲೂಕಿನಾದ್ಯಂತ ಇಡೀ ದಿನ ಮಳೆ

ನಾಗೇಶ ಎಸ್

ಹನೂರು: ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆಯ ತನಕ ಆಗಾಗ್ಗೆ ತುಂತುರು ಮಳೆ ಸುರಿಯಿತು. ಇದರಿಂದ ಜನ ಜೀವನ ಅಸ್ತವ್ಯವಸ್ತವಾಗಿತ್ತು.

ತಾಲೂಕಿನಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯ ನಂತರ ಆರಂಭವಾದ ತುಂತುರು ಮಳೆ ಆಗಾಗ್ಗೆ ಸುರಿಯುತ್ತಲೇ ಇತ್ತು. ಇದರಿಂದ ಜನರ ಸಂಚಾರ ವಿರಳವಾಗಿತ್ತು. ವ್ಯಾಪಾರ, ವಹಿವಾಟು ಕ್ಷೀಣಿಸಿತ್ತು. ಕೆಲಸ, ಕಾರ್ಯಗಳ ನಿಮಿತ್ತ ಕಚೇರಿಗಳಿಗೆ ಆಗಮಿಸುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಆಗಾಗ್ಗೆ ಸುರಿಯುತ್ತಿದ್ದ ತುಂತುರು ಮಳೆಗೆ ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಈ ಭಾಗದಲ್ಲಿ ಮಹಿಳಾ ಕೂಲಿ ಕಾರ್ಮಿಕರಿಂದ ರಾಗಿ ಬೆಳೆಯಲ್ಲಿ ಕಳೆ ತೆಗೆಸುವುದು ಆರಂಭವಾಗಿದ್ದು, ಎಂದಿನಂತೆ ಬೆಳಗ್ಗೆ ಮಹಿಳಾ ಕೂಲಿ ಕಾರ್ಮಿಕರು ಜಮೀನುಗಳಿಗೆ ತೆರಳಿ ಕೆಲಸದಲ್ಲಿ ತೊಡಗಿದ್ದರು. ಆದರೆ ಆಗಾಗ್ಗೆ ಸುರಿಯುತ್ತಿದ್ದ ಮಳೆಯಿಂದ ತೊಂದರೆ ಅನುಭವಿಸುವಂತಾಯಿತು. ಕಾಡಂಚಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಹೆಚ್ಚು ಜನರು ಮನೆಯಲ್ಲೇ ಕಾಲ ಕಳೆಯುವಂತಾಯಿತು. ಈ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿತ್ತು. ಮೋಡಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಜನರು ಟೀ, ಕಾಫಿ, ಬೋಂಡ, ಬಜ್ಜಿ ಹಾಗೂ ಇನ್ನಿತರ ಕರಿದ ತಿನಿಸುಗಳ ಮೊರೆ ಹೋದರು.