ಜಿಲ್ಲೆ

ವಿಪತ್ತು ನಿರ್ವಹಣೆಗೆ ಸಜ್ಜು

ನಾಗೇಶ ಎಸ್

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನಲ್ಲಿ ಮಳೆಯಿಂದ ಉಂಟಾಗಬಹುದಾದ ಅನಾಹುತವನ್ನು ತಡೆಗಟ್ಟಲು ತಾಲೂಕು ಆಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ಈಗಾಗಲೇ 4 ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಯಾವುದೇ ರೀತಿಯ ಅನಾಹುತ ಆಗದಂತೆ, ಅದರಲ್ಲೂ ಜೀವ ಹಾನಿ ಆಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಮೋಹನ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ತುರ್ತಾಗಿ ಅಧಿಕಾರಿಗಳ ಸಭೆ ಕರೆದು ನಿರ್ದೇಶನ ನೀಡಲಾಗಿದೆ. ಈಗಾಗಲೇ ಬಿ ಶೆಟ್ಟಿಗೇರಿಯ ಗೋದಾಮಿನಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಬಲ್ಯಮಂಡೂರಿನಲ್ಲೂ ಕಾಳಜಿ ಕೇಂದ್ರವನ್ನು ತೆರೆದು ಈಗಾಗಲೇ ಒಂದು ಕುಟುಂಬಕ್ಕೆ ಆಶ್ರಯ ನೀಡಲಾಗಿದೆ. ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆಯ ತಾಲೂಕು ಕಚೇರಿಯಲ್ಲಿ 24/7 ಕಂಟ್ರೋಲ್ ರೂಮ್ ತೆರೆದಿದ್ದು ಸಾರ್ವಜನಿಕರು ಕರೆ ಮಾಡುವ ಮೂಲಕ ಸಹಾಯ ಪಡೆದುಕೊಳ್ಳಬಹುದಾಗಿದೆ. ಹಾಡಿಗಳಿಗೆ ಐಟಿಡಿಪಿ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಿ, ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.