ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಜೋರು ಮಳೆ ಸುರಿದಿದ್ದು, ಮಳೆಯ ನಡುವೆ ಕೆರೆ ಹಾವುಗಳ ಸರಸ ನೋಡುಗರ ಗಮನ ಸೆಳೆಯಿತು.
ಬೆಟ್ಟದಪುರ ವ್ಯಾಪ್ತಿಯ ಸೂಳೆಕೋಟೆ, ಹೊನ್ನಾಪುರ, ಅಂಬಲಾರೆ, ಕಣಗಾಲು, ರಾಜನಬಿಳಗೂಲಿ, ಹುಣಸೆಕೊಪ್ಪಲು, ಹಲಗನಹಳ್ಳಿ, ಸುರಗಳ್ಳಿ, ಗೊರಹಳ್ಳಿ, ಬೆಟ್ಟದಪುರ, ಅತ್ತಿಗೋಡು, ನಾಗನಹಳ್ಳಿ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಸಮಯ ಗುಡುಗು ಸಹಿತ ಜೋರು ಮಳೆ ಸರಿಯಿತು. ಇದೇ ವೇಳೆ ಚಪ್ಪರದಹಳ್ಳಿ ಸಮೀಪದ ವಡ್ಡರಬೈಲಕುಪ್ಪೆ ಗ್ರಾಮದ ಚಿಕ್ಕಕೆರೆಯಲ್ಲಿ ಮಳೆಯ ನಡುವೆ ಎರಡು ಕೇರೆ ಹಾವುಗಳು ನೀರಿನಲ್ಲಿ ಸರಸವಾಡುವುದು ಸ್ಥಳೀಯ ನಿವಾಸಿಗಳ ಗಮನಸೆಳೆಯಿತು. ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ಹಾವುಗಳು ಸರಸವಾಡಿದವು.
ಜೋರು ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದಲ್ಲಿ ಇರುವಂತಹ ಜಮೀನುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕೆರೆಯಂತಾಗಿದ್ದವು.