ಮಾಯಕೊಂಡ: ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಮುಂಗಾರು ಮಳೆಯ ಕೊರತೆಯಿಂದ ಹೋಬಳಿಯ ಹಲವು ಗ್ರಾಮಗಳಲ್ಲಿ ಮೆಕ್ಕೆಜೋಳ ಬಿತ್ತನೆ ತಡವಾಯಿತು. 20 ರಿಂದ 25 ದಿನದ ಪೈರಿನ ಮಧ್ಯೆ ಮುಳ್ಳು ಸಜ್ಜೆ ಮತ್ತಿತರ ಕಳೆ ಬೆಳೆದು ನಿಂತಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆ ಸಾಧ್ಯವಾಗಿರಲಿಲ್ಲ. ಸೋಮವಾರ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ತರಕಾರಿ ಬೆಳೆಗಾರರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು.
ತಾಲೂಕಿನ ಮಾಯಕೊಂಡ, ಆನಗೋಡು ಹೋಬಳಿಗಳಲ್ಲಿ ಹೆಚ್ಚಾಗಿ ತರಕಾರಿ ಬೆಳೆಯುತ್ತಾರೆ. ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ಎಲೆಕೋಸು ಇಲ್ಲಿನ ತರಕಾರಿ ಬೆಳೆ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ದಿನೇ ದಿನೆ ಏರಿಕೆಯಾಗುತ್ತಿದೆ. ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ ರೈತರ ಕೈ ಹಿಡಿದಿವೆ.
ಒಂದೂವರೆ ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿಸಿದ್ದೇನೆ. ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ದಿಂಡದಹಳ್ಳಿ ರೈತ ಬಸವರಾಜಪ್ಪ.
ಎರಡು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು ಫಸಲಿಗೆ ಬಂದಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಟೊಮ್ಯಾಟೊ ಮಾರುಕಟ್ಟೆಗೆ ಕಳಿಸಿದ್ದೇವೆ. ಉತ್ತಮ ದರ ಸಿಕ್ಕಿದೆ. ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಹುಚ್ಚವನಹಳ್ಳಿಯ ಪ್ರಗತಿಪರ ಯುವ ರೈತರಾದ ಹರೀಶ್, ಗಿರೀಶ್.
ಮನೆ ಕುಸಿತ: ಮಾಯಕೊಂಡದ ಉಪ್ಪಾರ ಕಾಲನಿಯ ಹನುಮಂತಮ್ಮ ಎನ್ನುವವರ ಮನೆ ಗೋಡೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮನೆ ಕಳೆದುಕೊಂಡು ಬೀದಿಗೆ ಬಂದಿದ್ದೇವೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ಕೊಡಬೇಕು ಎಂದು ಮನೆ ಕಳೆದುಕೊಂಡ ಹನುಮಂತಮ್ಮ ಮನವಿ ಮಾಡಿದ್ದಾರೆ.