ವಿಜಯನಗರ ಜಿಲ್ಲೆಯಲ್ಲಿ 36.48 ಮಿ.ಮೀ
ಮೃತಪಟ್ಟ ಎರಡು ಸಾವಿರ ಕೋಳಿಮರಿಗಳು
ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗಿನ ಜಾವದ ವರೆಗೆ ಗುಡುಗು ಮಿಂಚುಗಳ ಆರ್ಭಟದೊಂದಿಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಬಹುತೇಕ ಚೆಕ್ ಡ್ಯಾಂಗಳು, ಗೋಕಟ್ಟೆಗಳು ಭರ್ತಿಯಾಗಿ ಹಳ್ಳಗಳು ಕೆರೆಗಳತ್ತ ಮೈದುಂಬಿ ಹರಿಯುತ್ತಿವೆ.
ಬೆಳಗಿನ ವರೆಗೆ ನಿರಂತರ ಬಿರುಸು ಮಳೆಯಾದ ಕಾರಣ ಹೊಲಗಳಲ್ಲಿರುವ ಏರಿಗಳು, ಒಡ್ಡುಗಳು ಒಡೆದು ಬೆಳೆಗಳು ನೀರಿನಿಂದ ಆವೃತವಾಗಿವೆ. ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳ ಮಾತಾಗಿದೆ. ಆದರೆ, ಕೊಟ್ಟೂರು ಸಮೀಪದ ಸುಟ್ಟಕೋಡಿಹಳ್ಳಿ ಗ್ರಾಮದಲ್ಲಿ ನಡುರಾತ್ರಿ ಸುರಿದ ಮಳೆಗೆ ನೀರು ಕೋಳಿ ಫಾರಂಗೆ ನುಗ್ಗಿದದ್ದು ಎರಡು ಸಾವಿರ ಕೋಳಿಮರಿಗಳು ಮೃತಪಟ್ಟಿವೆ.
ಪ್ರಸಕ್ತ ಮುಂಗಾರಿನಲ್ಲಿ ನಿರಂತರವಾಗಿ ತುಂತುರು ಮಳೆಯಾಗಿದ್ದು ಹೊರತುಪಡಿಸಿ ಕಳೆದ ಎರಡು ವರ್ಷದಿಂದ ಒಂದೇ ಒಂದು ದೊಡ್ಡ ಮಳೆಯಾಗಿರಲಿಲ್ಲ. ಕಳೆದ ವರ್ಷ ಮಳೆ ಇಲ್ಲದೇ ಬೆಳೆಹಾನಿಯಾಗಿ ಅಪಾರ ಹಾನಿ ಅನುಭವಿಸಿದ್ದ ರೈತರಿಗೆ ಮಳೆ ಸಂತಸ ತಂದಿದೆ. ಸಾವಿರಾರು ಹೆಕ್ಟೇರ್‌ನಲ್ಲಿರುವ ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ ಮುಂತಾದ ಬೆಳೆಗಳಿಗೆ ಸಕಾಲದಲ್ಲಿ ಸಮೃದ್ಧವಾಗಿ ಮಳೆಯಾಗಿರುವುದು ರೈತರಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಜಲ್ಲೆಯ ನೂರಾರು ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ಭತ್ತ, ಬಾಳೆ, ಕಬ್ಬು ಮುಂತಾದ ಬೆಳೆಗಳು ಜಲಾವೃತಗೊಂಡಿವೆ. ತಾಲ್ಲೂಕಿನ ಕಮಲಾಪುರ, ಮಲಪನಗುಡಿ ಸೇರಿದಂತೆ ಕೆಲ ರಸ್ತೆ ಮಾರ್ಗಗಳಲ್ಲಿ ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಗರದ ಹಲವು ಬಡಾವಣೆಗಳಲ್ಲಿ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ಗುಡಿಸಲು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ 36.48 ಮಿ.ಮೀ ಮಳೆಯಾಗಿದೆ. ಕೊಟ್ಟೂರು ತಾಲೂಕಿನ 77.70 ಮಿ.ಮೀ. ಮಿ.ಮೀ., ಮಳೆಯಾಗಿದೆ. ಹೊಸಪೇಟೆ 43.46 ಮಿ.ಮೀ., ಹಗರಿಬೊಮ್ಮನಹಳ್ಳಿಯಲ್ಲಿ 41.20 ಮಿ.ಮೀ, ಕೂಡ್ಲಿಗಿ 21.16 ಮಿ.ಮೀ, ಹರಪನಹಳ್ಳಿ 17.90 ಮಿ.ಮೀ., ಮಳೆಯಾಗಿದೆ. ಹೂವಿನಹಡಗಲಿ 17.30 ಮಿ.ಮೀ. ಮಳೆಯಾಗಿದ ವರದಿಯಾಗಿದೆ.