ಪಪ್ಪಾಯ ದರ ಕುಸಿತ, ರೈತನಲ್ಲಿ ಹೆಚ್ಚಿದ ಆತಂಕ
ವಿಜಯ ವಾಣಿ ವಿಶೇಷ ಕಲಬುರಗಿ
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿಯೊಂದಿಗೆ ಸುರಿದ ಮಳೆ ಬಾಳೆ, ಪಪ್ಪಾಯ ಸೇರಿ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟವಾಗಿದೆ.
ಸುಮಾರು ೨೭ ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಇದೆ. ಈ ಪೈಕಿ ಹಣ್ಣು, ತರಕಾರಿ, ಹೂವು, ಪ್ಲಾಂಟೇಶನ್ ಸೇರಿ ಅನೇಕ ಬೆಳೆಗಳನ್ನು ಬೆಳೆಯಲಾಗಿದೆ. ಪರ್ಯಾಯ ಬೆಳೆಗೆ ರೈತ ಮುಂದಾಗದ್ದರಿAದ ಪ್ರತಿವರ್ಷ ಅದೇ ಬೆಳೆ ಕಾಣಸಿಗುತ್ತಿದೆ.
ಬಾಳೆ, ಪಪ್ಪಾಯ, ಕಲ್ಲಂಗಡಿ ಸೇರಿ ಮಳೆ-ಗಾಳಿಗೆ ಸುಮಾರು ೭೦ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಮಾರ್ಚ್ನಲ್ಲಿ ೬.೪ ಹೆಕ್ಟೇರ್ ಬಾಳೆ, ೨.೭೦ ಹೆಕ್ಟೇರ್ ಪಪ್ಪಾಯ, ೭ ಹೆಕ್ಟೇರ್ ಕಲ್ಲಂಗಡಿ ಹಾಗೂ ಏಪ್ರಿಲ್‌ನಲ್ಲಿ ೯.೮ ಹೆಕ್ಟೇರ್ ಬಾಳೆ, ೧೭.೨೫ ಹೆಕ್ಟೇರ್ ಪಪ್ಪಾಯ ಜತೆಗೆ ಮಾವು, ಟೊಮ್ಯಾಟೊ ಸೇರಿದೆ. ಇತ್ತೀಚಿನ ಮರ‍್ನಾಲ್ಕು ದಿನಗಳಲ್ಲಿ ೧೭.೪ ಹೆಕ್ಟೇರ್ ಬಾಳೆ ಜತೆಗೆ ಪಪ್ಪಾಯ, ಕಲ್ಲಂಗಡಿ, ಈರುಳ್ಳಿ ಇತರ ಬೆಳೆಗಳಿಗೂ ಹೊಡೆತ ಬಿದ್ದಿದೆ. ನೆಲಕ್ಕುರುಳಿದ ಬೆಳೆಯಿಂದ ಸುಮಾರು ಒಂದು ಕೋಟಿಗೂ ಅಧಿಕ ಲಾಸ್ ಆಗಿದೆ. ಅಫಜಲಪುರ, ಜೇವರ್ಗಿ, ಆಳಂದ, ಕಲಬುರಗಿ, ಶಹಾಬಾದ್ ತಾಲೂಕುಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.
೨೭ ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ
ಜಿಲ್ಲೆಯ ಸುಮಾರು ೨೭ ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆಯಲ್ಲಿ ಅಫಜಲಪುರ ತಾಲೂಕಿನಲ್ಲಿ ೩೭೬೯ ಹೆಕ್ಟೇರ್, ಆಳಂದ ೪೮೭೮, ಚಿಂಚೋಳಿ ೪೧೨೨, ಚಿತ್ತಾಪುರ ೧೫೫೯, ಕಲಬುರಗಿ ೩೬೦೩, ಜೇವರ್ಗಿ ೩೦೮೭, ಕಾಳಗಿ ೧೪೧೦, ಕಮಲಾಪುರ ೧೬೫೩, ಸೇಡಂ ೮೩೮, ಶಹಾಬಾದ್ ೩೧೩, ಯಡ್ರಾಮಿ ೧೩೪೫ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಬಾಳೆಹಣ್ಣು ೪೨೦೦ ಹೆಕ್ಟೇರ್, ನಿಂಬೆ ೧೨೦೦, ಕಲ್ಲಂಗಡಿ ೧೨೦೦, ಮಾವು ೫೦೦, ಪಪ್ಪಾಯ ೧೦೦೦, ದ್ರಾಕ್ಷಿ ೪೪೪, ತರಕಾರಿಯಲ್ಲಿ ಈರುಳ್ಳಿ ೫೭೯೭, ಹಸಿ ಮೆಣಸಿನಕಾಯಿ ೩೧೫೯, ಟೊಮ್ಯಾಟೊ ೧೯೯೪, ಬ್ರಿಂಜಾಲ್ ೫೪೪, ಅರಿಷಿಣ ೭೧೩, ಚಿಲ್ಲಿ ೩೦೦೦, ಆಯಿಲ್ ಪಾಮ್ ೧೨೬, ಹೂವು ರೋಸ್ ೨೮೨, ಟ್ಯೂಬ್‌ರೋಸ್ ೧೪೬, ಜೆಸ್ಮಾಯಿನ್ ೧೩೪, ಈರುಳ್ಳಿ ೧೫೦೦ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಬಹುತೇಕ ಕಡೆ ತೋಟಗಾರಿಕೆ ಬೆಳೆ ಬೆಳೆದರೂ ಆಳಂದ ಮತ್ತು ಅಫಜಲಪುರ ತಾಲೂಕಿನಲ್ಲಿ ಈ ಪ್ರದೇಶ ಹೆಚ್ಚು. ಪೇರು ಮತ್ತು ಲಿಂಬು ಏರಿಯಾದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ವಿಶೇಷವಾಗಿ ಅಫಜಲಪುರ, ಜೇವರ್ಗಿ(ವಿಜಯಪುರ ಗಡಿ) ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಬಾಳೆ ಕೆಜಿಗೆ ೮-೧೨ ರೂ. ಇದ್ದರೆ, ೨೮ ರೂ. ಇದ್ದ ಪಪ್ಪಾಯ ದರ ಇದೀಗ ಎರಡ್ಮೂರು ರೂ.ಗೆ ಕುಸಿದಿದೆ. ಹೀಗಾಗಿ ಅದ್ಭುತ ಫಸಲು ತೆಗೆದಿರುವ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಭಾಗದ ರೈತರು ಪರ್ಯಾಯ ಬೆಳೆಗೆ ಮುಂದಾಗಬೇಕಿದೆ. ತೊಗರಿಯನ್ನೇ ನಂಬಿ ಕೂಡುವುದಕ್ಕಿಂತ ಅಲ್ಪ ಪ್ರದೇಶದಲ್ಲಿ ತೋಟಗಾರಿಕೆ, ವಾಣಿಜ್ಯ ಬೆಳೆಗೂ ಪ್ರಾಮುಖ್ಯ ನೀಡಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ.
| ಸಂತೋಷಕುಮಾರ ಇನಾಮದಾರ್
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ