ಜಿಲ್ಲೆ

ಜೋರು ಮಳೆಗೆ ಬೆಚ್ಚಿಬಿದ್ದ ನಾಗಮಂಗಲ ತಾಲೂಕಿನ ಜನರು: ವರುಣನ ಅಬ್ಬರಕ್ಕೆ ಲಕ್ಷಾಂತರ ರೂ ನಷ್ಟ

reportermys

ನಾಗಮಂಗಲ: ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಜೋರು ಮಳೆಗೆ ನೂರಾರು ತೆಂಗಿನ ಮರಗಳು ಧರೆಗುರುಳಿದ್ದು, ಲಕ್ಷಾಂತರ ರೂ ಮೌಲ್ಯದ ತರಕಾರಿ ಬೆಳೆ ನಷ್ಟವಾಗಿವೆ.

ಹೊಣಕೆರೆ, ಬಿಂಡಿಗನವಿಲೆ ಹಾಗೂ ಕಸಬಾ ಹೋಬಳಿ ವಿವಿಧೆಡೆ ತರಕಾರಿ ಬೆಳೆಗಳು ಹಾನಿಗೊಳಗಾಗಿವೆ. ಜಮೀನಿನಲ್ಲಿ ಕೆರೆಯಂತೆ ನೀರು ತುಂಬಿದ್ದು, ತರಕಾರಿ ಬೆಳೆಗಳು ನೀರಿನಲ್ಲಿ ತೇಲುತ್ತಿದ್ದರೆ, ಇನ್ನು ಕೆಲವೆಡೆ ಬಿರುಗಾಳಿಗೆ ಬೆಳೆಗಳು ನೆಲಕಚ್ಚಿ ನಷ್ಟವಾಗಿವೆ. ತಾಲೂಕಿನ ಕಸಬಾ ಹೋಬಳಿಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಹೆಚ್ಟು ನಷ್ಟವಾಗಿದೆ. ಇನ್ನು ಪಿ.ನೇರಲಕೆರೆಯಲ್ಲಿ ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ರಸ್ತೆಗೆ ಬಿದ್ದಿದ್ದು ಯಾವುದೇ ಅವಘಡಗಳು ಸಂಭವಿಸಿಲ್ಲ. ಕಸಬಾ ಹೋಬಳಿಯ ಪಿ.ನೇರಲಕೆರೆ ಹಾಗೂ ಪಿ.ಮಲ್ಲೇನಹಳ್ಳಿ ಗ್ರಾಮಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿದ್ದು ರೈತರು ಕಂಗಾಲಾಗಿದ್ದಾರೆ. ವಿವಿಧೆಡೆ ೯ ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.